ಕಾರವಾರ: ಭಾರತೀಯ ಕೋಸ್ಟ್ ಗಾರ್ಡ್ ಶುಕ್ರವಾರ ನಡೆಸಿದ ಕ್ಷಿಪ್ರ ರಕ್ಷಣಾ ಕಾರ್ಯಾಚರಣೆಯಲ್ಲಿ 18 ಭಾರತೀಯರು ಹಾಗೂ ಓರ್ವ ಇಥಿಯೋಪಿಯನ್‌ನನ್ನು ಸೇರಿ ಒಟ್ಟು 19 ಮಂದಿಯ ಜೀವ ರಕ್ಷಣೆ ಮಾಡಿದೆ.
ಮಧ್ಯ ಆಫ್ರಿಕಾದ ಗ್ಯಾಬೋನ್ ರಾಷ್ಟ್ರದ ಬಿಟುಮಿನ್ ಸಾಗಿಸುವ ಹಡಗೊಂದು ಯುಎಇಯ ಖೋರ್ ಫಕ್ಕನ್‌ನಿಂದ ನವಮಂಗಳೂರು ಬಂದರಿನತ್ತ ತೆರಳುತ್ತಿದ್ದ ವೇಳೆ, ರತ್ನಗಿರಿ ಕರಾವಳಿಯ ಪಶ್ಚಿಮಕ್ಕೆ 41 ಮೈಲುಗಳಷ್ಟು ದೂರದಲ್ಲಿ ಮುಳುಗುತ್ತಿರುವ ಬಗ್ಗೆ ಮರೈನ್ ರೆಸ್ಕ್ಯೂ ಕೋ-ಆರ್ಡಿನೇಶನ್ ಸೆಂಟರ್ (ಎಂಆರ್‌ಸಿಸಿ)ಗೆ ಸಂದೇಶ ರವಾನೆಯಾಗಿತ್ತು. ದೂರು ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಸಮೀಪದಲ್ಲೇ ಗಸ್ತು ತಿರುಗುತ್ತಿದ್ದ ಕೋಸ್ಟ್ ಗಾರ್ಡ್ ಹಡಗುಗಳಾದ ಐಸಿಜಿಎಸ್ ಸುಜೀತ್ ಮತ್ತು ಐಸಿಜಿಎಸ್ ಅಪೂರ್ವವನ್ನು ರಕ್ಷಣಾ ಚಟುವಟಿಕೆಗೆ ತೆರಳಲು ಎಂಆರ್‌ಸಿಸಿ ಸೂಚಿಸಿತ್ತು. ಇದೇವೇಳೆ ಸುಧಾರಿತ ಲಘು ಹೆಲಿಕಾಪ್ಟರ್ ಅನ್ನು ಕೂಡ ಈ ಕಾರ್ಯಾಚರಣೆಗೆ ನಿಯೋಜಿಸಲಾಯಿತು.
ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಸಿ, ಮುಳುಗುತ್ತಿದ್ದ ಹಡಗಿನಲ್ಲಿದ್ದ 19 ಮಂದಿಯನ್ನ ರಕ್ಷಣೆ ಮಾಡಲಾಗಿದೆ. ಅವರಿಗೆ ವೈದ್ಯಕೀಯ ನೆರವು ನೀಡಲಾಗಿದೆ. 3911 ಮೆಟ್ರಿಕ್ ಟನ್ ಬಿಟುಮಿನ್ ತುಂಬಿರುವ ಹಡಗು ನೀರು ತುಂಬಿ ಮುಳುಗುವ ಹಂತದಲ್ಲಿದ್ದು, ಅದನ್ನು ಮೇಲಕ್ಕೆತ್ತಿ ಸುರಕ್ಷಿತವಾಗಿ ಟೋಯಿಂಗ್ ಮಾಡಿಕೊಂಡು ಹೋಗಲು ತುರ್ತು ಟೋಯಿಂಗ್ ಹಡಗನ್ನೂ ಸಜ್ಜುಗೊಳಿಸಲಾಗಿದೆ.