ಕಾರವಾರ: ಔಪಚಾರಿಕ ಶಿಕ್ಷಣವನ್ನು ಪಡೆಯದೇ ಇರುವಂತಹ 15 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಅಕ್ಷರ ಜ್ಞಾನವನ್ನು ನೀಡಿ ನವಸಾಕ್ಷರರನ್ನಾಗಿ ಮಾಡವುದೇ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಹಾಗೂ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯ ಉದ್ದೇಶವಾಗಿದೆ ಎಂದು ಜಿಲ್ಲಾ ವಯಸ್ಕರ ಶಿಕ್ಷಣ ಅಧಿಕಾರಿ ಶ್ರೀಕಾಂತ ಹೆಗಡೆ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಜರುಗಿದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯಲ್ಲಿ ಭಾಗವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲೆಯಲ್ಲಿ ಸಾಕ್ಷರತೆ ಪ್ರಮಾಣವು 86 ಪ್ರತಿಶತ ಇದ್ದಾಗಿಯೂ ಕೂಡ ಮಹಿಳಾ ಸಾಕ್ಷರತಾ ಪ್ರಮಾಣ ಕಡಿಮೆ ಇದೆ. ದೇಶದ ಪ್ರಗತಿಗೆ ಸಾಕ್ಷರತೆ ಅತೀ ಮುಖ್ಯವಾದ ಅಂಶವಾಗಿದ್ದು, ಮಹಿಳೆಯರಿಗೂ ವಿದ್ಯೆ ನೀಡಿ ಮುಖ್ಯವಾಹಿನಿಗೆ ತರುವ ಕಾರ್ಯವಾಗಬೇಕು. ಜೊತೆಗೆ ಇಂದಿನ ದಿನಮಾನಕ್ಕೆ ಅನುಸಾರವಾಗಿ ಕಂಪ್ಯೂಟರ್ ಸಾಕ್ಷರತೆ ಅವಶ್ಯಕವಾಗಿದೆ. ಹಾಗಾಗಿ ಕಂಪ್ಯೂಟರ ಸಾಕ್ಷರತೆ ನಮ್ಮ ಯೋಜನೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
1964ರಿಂದೀಚೆಗೆ ಸತತವಾಗಿ ಬೇರೆ ಬೇರೆ ಹೆಸರುಗಳಿಂದ ಈ ಸಾಕ್ಷರತಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಜಿಲ್ಲೆಯಲ್ಲಿ ಎಲ್ಲಾ ತಾಲೂಕುಗಳಲ್ಲಿ ಸಮೀಕ್ಷೆ ಮೂಲಕ ಅನಕ್ಷರಸ್ಥರನ್ನು ಗುರುತಿಸಿ ಅವರನ್ನು ನವಸಾಕ್ಷರರನ್ನಾಗಿ ಮಾಡುವ ಉದ್ದೇಶವನ್ನು ಈ ಯೋಜನೆ ಮೂಲಕ ಹೊಂದಲಾಗಿದೆ. ಇದಕ್ಕೆ ಇಲಾಖಾ ಅಧಿಕಾರಿಗಳ ಜೊತೆಗೆ ಸಾರ್ವಜನಿಕರ ಸಹಕಾರವು ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ಬಳಿಕ ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿ ಸತೀಶ್ ಪವಾರ ಮಾತನಾಡಿ, ಶಿಕ್ಷಣದಿಂದ ವಂಚಿತರಾದಂತಹವರ ಸಾಕ್ಷರತೆಗಾಗಿ ಈ ಯೋಜನೆ ಜಾರಿಗೊಳಿಸಲಾಗಿದ್ದು, ಎಲ್ಲರನ್ನೂ ಸಾಕ್ಷರಗೊಳಿಸಿ ಅವರ ಜೀವನಮಟ್ಟವನ್ನು ಸುಧಾರಿಸುವ ಹಾಗೂ ಸಾಕ್ಷರತೆಯ ಕುರಿತು ಅರಿವು ಮೂಡಿಸುವುದು ಈ ಯೋಜನೆಯ ಬಹುದೊಡ್ಡ ಉದ್ದೇಶವಾಗಿದೆ ಎಂದು ಹೇಳಿದರು.
ಜಿಲ್ಲಾ ಸಾಕ್ಷರತಾ ಸಂಯೋಜಕಿ ಹಾಗೂ ಶಿಕ್ಷಕಿ ಸಾಧನಾ ಬರಗಿ ಮಾತನಾಡಿ, ಮೊದಲಿನಿಂದಲೂ ರಾತ್ರಿ ಶಾಲೆ, ಮುಂದುವರಿಕೆ ಶಿಕ್ಷಣ ಕೇಂದ್ರ, ಸಾಕ್ಷರತಾ ಕಲಿಕಾ ಕೇಂದ್ರಗಳ ಮೂಲಕ ವಿವಿಧ ಸ್ಥಳಗಳಲ್ಲಿ ಸಾಕ್ಷರತಾ ಕೇಂದ್ರಗಳನ್ನು ತೆರೆದು ಸಾಕ್ಷರರನ್ನಾಗಿ ಮಾಡುವ ಕಾರ್ಯವು ವ್ಯವಸ್ಥಿತವಾಗಿ ಜರುಗುತ್ತಿದೆ ಎಂದು ತಿಳಿಸಿದರು.
ಕುಮಟಾ ಡಯಟ್‌ನ ಪ್ರಾಂಶುಪಾಲ ಎನ್.ಜಿ.ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಕ್ಷರರು ನಿರಕ್ಷರರಿಗೆ ಕಲಿಸಬೇಕು. ಕಲಿತವರು ಕಲಿಯದವರಿಗೆ ಕಲಿಸಬೇಕು. ವಿದ್ಯೆಯಿಲ್ಲದವರಿಗೆ ವಿದ್ಯೆ ನೀಡುವುದು ಸಂತಸದ ವಿಚಾರವಾದುದು, ಜಿಲ್ಲೆಯನ್ನು ಸಾಕ್ಷರತೆಯಲ್ಲಿ ಉತ್ತಮಪಡಿಸೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯದರ್ಶಿ ನಾಗೇಶ ರಾಯ್ಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನರೇಂದ್ರ ನಾಯಕ್, ರಾಜ್ಯ ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ಇದ್ದರು.