ಕಾರವಾರ: ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಗಳ ಪುನರ್ವಸತಿ ಹಾಗೂ ಪೌರ ಕಾರ್ಮಿಕರ ಖಾಯಂಗೊಳಿಸುವ ಕುರಿತು ಸರಕಾರದ ಮಟ್ಟದಲ್ಲಿ ಚರ್ಚಿಸಲಾಗಿದ್ದು, ಅಂಥವರ ಪುನರ್ವಸತಿಗಾಗಿ ಕಾರ್ಯಕ್ರಮ ಅನುಷ್ಠಾನಗೊಳಿಸಲು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ (ಕೋಟೆ) ತಿಳಿಸಿದರು.
ರಾಜ್ಯದ 18 ಜಿಲ್ಲೆಗಳಲ್ಲಿ ಕೈಗೊಂಡ ಮ್ಯಾನ್ಯುಯಲ್ ಸ್ಕಾö್ಯವೆಂಜರ್‌ಗಳ ಸಮೀಕ್ಷೆಯ ಕುರಿತು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಬೆಂಗಳೂರಿನ ವಿಕಾಸ ಸೌಧದ ಸಭಾಭವನದಲ್ಲಿ ವಿಡಿಯೋ ಸಂವಾದದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಸಮೀಕ್ಷೆ ಕುರಿತಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ಯಾವ ಕಾರ್ಮಿಕನು ಸರಕಾರದ ಸವಲತ್ತಿನಿಂದ ವಂಚಿತರಾಗದ ರೀತಿಯಲ್ಲಿ ಬಂದಂತಹ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಅರ್ಜಿಗಳನ್ನು ಪರಿಶೀಲಿಸಬೇಕು, ಅರ್ಜಿ ತಿರಸ್ಕರಿಸಲು ಸ್ಪಷ್ಟ ಕಾರಣಗಳನ್ನು ತಿಳಿಸಬೇಕು, ಈ ಕುರಿತು 10 ದಿನಗಳೊಳಗಾಗಿ ವಸ್ತುನಿಷ್ಠ ವರದಿಯನ್ನು ಆಯೋಗಕ್ಕೆ ಸಲ್ಲಿಸಬೇಕು ಎಂದು ಜಿಲ್ಲಾ ಮಟ್ಟದ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ, ಪಂಚಾಯತರಾಜ್ ಅಧಿಕಾರಿಗಳ ಸಮೀಕ್ಷಾ ಸಮಿತಿ ಸಮೀಕ್ಷೆ ಮಾಡಿ, ಪರಿಶೀಲಿಸಿ, ನಿರ್ಣಯಿಸಿ ಒಪ್ಪಿಗೆ ನೀಡಿದ ನಂತರ ಅರ್ಜಿಯನ್ನು ಪುನರ್ ಪರಿಶೀಲಿಸುವ ಕಾರ್ಯ ಅವಶ್ಯವಿಲ್ಲದ ಕಾರಣದಿಂದ ಅರ್ಜಿಯನ್ನು ಪುರಸ್ಕರಿಸಬೇಕು. ಈ ಕುರಿತಾಗಿ ಯಾವುದೇ ರೀತಿಯ ಒತ್ತಡ ತಂತ್ರ ಅನುಸರಿಸಿ ಅರ್ಜಿ ಹಾಕದಂತೆ ಮಾಡಿದ್ದಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ನು ಆಯೋಗಕ್ಕೆ ದೂರು ನೀಡಿದಲ್ಲಿ ಕಾನೂನು ರೀತ್ಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಹಾಗಾಗಿ ಯಾವ ಅಧಿಕಾರಿಗಳು ಅಂತಹ ಕಾರ್ಯವನ್ನು ಎಸಗಬಾರದು ಎಂದು ಎಚ್ಚರಿಸಿದರು.
ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಸಾವು ಸಂಭವಿಸಿದಾಗ ಮೃತರ ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ಸರಕಾರದ ಮಟ್ಟದಲ್ಲಿ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು ಎಂದ ಅವರು ಸ್ವತಃ ನಾವೇ ಖುದ್ದಾಗಿ ಸಮೀಕ್ಷೆಯಲ್ಲಿ ಪಾಲ್ಗೊಡು ಸ್ಥಳ ಪರಿಶೀಲನೆ ಮಾಡಿ ಅರ್ಜಿದಾರರನ್ನು ಕಂಡು ಸೂಕ್ತ ರೀತಿಯಲ್ಲಿ ಪರಿಶೀಲಿಸಲು ಮುಂದಾಗುತ್ತೇವೆ ಹಾಗೂ ಸಮಾಜ ಕಲ್ಯಾಣ ಅಧಿಕಾರಿಗಳ ಜೊತೆಗೆ ಇದೇ ಸೆಪ್ಟೆಂಬರ್ 28ನೇ ತಾರೀಕಿನಂದು ಮ್ಯಾನ್ಯುಯಲ್ ಸ್ಕಾö್ಯವೆಂಜರ್‌ಗಳ ಕುರಿತಂತೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಕುರಿತು ಜಿಲ್ಲೆಯಲ್ಲಿ ಸಲ್ಲಿಕೆಯಾದ ಅರ್ಜಿಗಳ ಹಾಗೂ ಅನೈರ್ಮಲ್ಯ ಶೌಚಾಲಯಗಳ ಮಾಹಿತಿ ಕೇಳಿದಾಗ, ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಉಪಸ್ಥಿತರಿದ್ದು, ಜಿಲ್ಲೆಯಲ್ಲಿ ಸಮೀಕ್ಷೆ ಕೈಗೊಳ್ಳಲಾಗಿದೆ. ಯಾವುದೇ ಅರ್ಜಿಗಳು ಸಲ್ಲಿಕೆಯಾಗಿಲ್ಲ ಹಾಗೂ ನಮ್ಮ ಜಿಲ್ಲೆಯಲ್ಲಿ ಪ್ರತಿ ಮನೆಗೂ ಶೌಚಾಲಯ ವ್ಯವಸ್ಥೆ ಇದ್ದು ಯಾವುದೇ ರೀತಿಯಲ್ಲಿ ಅನೈರ್ಮಲ್ಯ ಶೌಚಾಲಯಗಳು ಇಲ್ಲ. ಪ್ರತಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸಕ್ಕಿಂಗ್ ಮಷೀನ್ ಲಭ್ಯವಿರುವ ಕಾರಣದಿಂದ ಯಾವುದೇ ರೀತಿಯ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ರ ಬಳಕೆ ಇಲ್ಲ ಆ ಕಾರಣದಿಂದ ಯಾವುದೇ ಅರ್ಜಿಗಳು ಸಲ್ಲಿಕೆಯಾಗಿಲ್ಲ ಎಂದು ತಿಳಿಸಿದರು.
ಈ ವಿಡಿಯೋ ಸಂವಾದ ಸಭೆಯಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಕಾರ್ಯದರ್ಶಿ ಚಂದ್ರಕಲಾ, ಪಂಚಾಯತ ರಾಜ್ ಆಯುಕ್ತಾಲಯದ ಪ್ರತಿನಿಧಿಗಳು ಹಾಗೂ ಮಂಡ್ಯ, ರಾಮನಗರ, ತುಮಕೂರು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಬಳ್ಳಾರಿ, ಕೊಪ್ಪಳ, ಶಿವಮೊಗ್ಗ, ಬೀದರ್, ಗದಗ, ಚಿತ್ರದುರ್ಗ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ ಮತ್ತು ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಗಳು ಉಪಸ್ಥಿತರಿದ್ದರು.