ಕುಮಟಾ: ಗೋಕರ್ಣದ ಅಶೋಕೆಯಲ್ಲಿ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳವರ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಏರ್ಪಡಿಸಿದ್ದ ಯಕ್ಷಗಾನ ವೈಭವ ಜನರ ಮನಸೂರೆಗೊಂಡು ಪಾಲ್ಗೊಂಡ ಎಲ್ಲಾ ಕಲಾವಿದರ ಪರಿಶ್ರಮದಿಂದ ಅಭಿಮಾನಿಗಳಿಗೊಂದು ಕಲಾ ರಸದೂಟ ಬಡಿಸಿದಂತಾಗಿದೆ.
ಇಲ್ಲಿ ಬಡಗು ,ತೆಂಕು ಶೈಲಿಯ ಕಲಾವಿದರ ಮಿಶ್ರಣವಾಗಿ ಹೊಸದೊಂದು ವಾತಾವರಣ ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ. ಖ್ಯಾತ ಯಕ್ಷ ಭಾಗವತರಾದ ರಾಮಕೃಷ್ಣ ಹೆಗಡೆ ಹಿಲ್ಲೂರ್ ಹಾಗೂ ಮಹಿಳಾ ಭಾಗವತಿಕೆ ಖ್ಯಾತಿಯ ಶ್ರೀಮತಿ ಕಾವ್ಯಶ್ರೀ ಗುರುಪ್ರಸಾದ್ ಅಜೇರು ವೈಯಕ್ತಿಕವಾಗಿ, ದ್ವಂದ್ವವಾಗಿ ವೈವಿಧ್ಯಮಯವಾಗಿ ಹಾಡಿ ಸಭೆಯ ಮನ ಗೆಲ್ಲುವಲ್ಲಿ ಯಶಸ್ವಿಯಾದರು. ಪ್ರತಿಯೊಂದು ಗಾನಕ್ಕೂ ಅಷ್ಟೇ ಸುಂದರವಾಗಿ ಮದ್ದಲೆಯನ್ನು ನುಡಿಸುವುದರ ಮೂಲಕ ಅನುಭವಿ ಸರ್ವ ಕಲಾವಿದರಾದ ಎ.ಪಿ.ಪಾಠಕ್ ಪುಣಾ ಹಾಗೂ ಗುರುವಾಯನ ಕೆರೆ ಚಂದ್ರಶೇಖರ ಹಾಗೂ ಚಂಡೆವಾದನದಲ್ಲಿ ಗಜಾನನ, ಪ್ರಶಾಂತರವರು ಗಮನ ಸೆಳೆದರು.