ಕಾರವಾರ: ಮುಂದಿನ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ಸೋಮವಾರ ನಗರದ ಅಜ್ವೀ ಹೋಟೆಲ್‌ನಲ್ಲಿ ಕಾಂಗ್ರೆಸ್ ಕಾರ್ಯರ್ತರ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಸಂಘಟನೆಗಿಂತ ನಾಯಕರ ನಡುವಿನ ಮಾತಿನ ಜಟಾಪಟಿ ಹೆಚ್ಚಿನ ಸದ್ದು ಮಾಡಿತು.
ಕಾರವಾರದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ಹಿಂದೆ ಇದ್ದು, ಚುನಾವಣೆಗೆ ಕಷ್ಟವಾಗಲಿದೆ ಹಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಇನ್ನು ಚುನಾವಣೆ ಸಹ ಸಮೀಪಿಸುತ್ತಿದ್ದು, ಸಂಘಟನೆ ಮಾಡುವ ನಿಟ್ಟಿನಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾರ್ಯಕರ್ತರ ಸಭೆಯನ್ನ ಆಯೋಜನೆ ಮಾಡಲಾಗಿತ್ತು.
ಇನ್ನು ಸಭೆಯಲ್ಲಿ ಮಾತನಾಡುತ್ತಿದ್ದ ಹಿರಿಯ ಕಾಂಗ್ರೆಸ್ ಮುಖಂಡ ಪ್ರಭಾಕರ್ ಮಾಳ್ಸೇಕರ್, ಮಾಜಿ ಜಿಲ್ಲಾ ಪಂಚಾಯತ ಸದಸ್ಯೆ ಚೈತ್ರಾ ಕೋಠಾರಕರ್ ವಿರುದ್ಧ ಮಾತನಾಡಿದರು. ಚೈತ್ರಾ ಕೋಠಾರಕರ್ ಯಾರು, ಯಾವಾಗ ಪಕ್ಷಕ್ಕೆ ಬಂದಿದ್ದಾರೆ. ಅವರ ಕೊಡುಗೆ ಏನು. ಅಲ್ಲದೇ ಹಿಂದಿನ ಚುನಾವಣೆಯಲ್ಲಿ ಬೇರೆ ಅಭ್ಯರ್ಥಿಯನ್ನ ಬೆಂಬಲಿಸಿದ್ದಾರೆ ಎಂದು ಆರೋಪಿಸಿದರು.
ಇದರಿಂದ ಸಿಟ್ಟಿಗೆದ್ದ ಚೈತ್ರಾ ಕೋಠಾರಕರ್ ಪ್ರಭಾಕರ್ ಮಾಳ್ಸೇಕರ್ ವಿರುದ್ದ ನೇರವಾಗಿ ಕಿಡಿಕಾರಿದರು. ನಾನು ಪಕ್ಷಕ್ಕೆ ನಿಯತ್ತಾಗಿ ದುಡಿಯುತ್ತಿದ್ದು ಈವರೆಗೆ ಪಕ್ಷ ವಿರೋಧಿ ಕೆಲಸ ಮಾಡಿಲ್ಲ. ನನ್ನ ಮೇಲೆ ವೈಯಕ್ತಿಕವಾಗಿ ಸಿಟ್ಟಿದ್ದರೆ ಅದನ್ನ ಮನೆಯಲ್ಲಿ ಇಟ್ಟುಕೊಳ್ಳಿ. ಅದನ್ನ ಬಿಟ್ಟು ಪಕ್ಷದ ವೇದಿಕೆಯಲ್ಲಿ ಬಂದು ಆರೋಪ ಮಾಡಬೇಡಿ. ನಾನು ಬೇರೆಯವರಿಗೆ ಬೆಂಬಲ ನೀಡಿದ್ದೇನೆ ಎನ್ನುವುದಕ್ಕೆ ನಿಮ್ಮಲ್ಲಿ ಏನು ಸಾಕ್ಷಿ ಇದೆ ಎಂದು ಕಿಡಿಕಾರಿದ್ದು ಕೆಲ ಕಾಲ ಕಾರ್ಯಕರ್ತರು ಮೌನಕ್ಕೆ ಶರಣಾದರು.
ಇನ್ನು ಇದರಿಂದ ಅಸಮಾಧಾನಗೊಂಡ ಪ್ರಭಾಕರ್ ಮಾಳ್ಸೇಕರ್ ಸಭೆಯಿಂದ ಹೊರ ನಡೆಯಲು ಮುಂದಾದಾಗ ಅವರನ್ನ ಕೆಲವರು ತಡೆದರು. ಇನ್ನು ಇದೇ ವೇಳೆ ಜಿಲ್ಲಾ ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ ವಿರುದ್ದ ಮಾಜಿ ನಗರಸಭಾ ಅಧ್ಯಕ್ಷ ಗಣಪತಿ ನಾಯ್ಕ ಕಿಡಿಕಾರಿದರು. ನಿಮ್ಮಿಂದಲೇ ಪಕ್ಷಕ್ಕೆ ಹಿನ್ನಡೆಯಾಗಿದ್ದು ಎಲ್ಲದರಲ್ಲೂ ಮೂಗು ತೂರಿಸಬೇಡಿ ಎಂದಾಗ ನಾನು ಪಕ್ಷ ನೀಡಿದ ಕೆಲಸ ಮಾಡುತ್ತಿದ್ದೇನೆ ಎಂದು ಶಂಭು ಶೆಟ್ಟಿ ಉತ್ತರ ನೀಡಿದರು.
ಇದೇ ವೇಳೆ ಇನ್ನೋರ್ವ ಮುಖಂಡ ಬಾಬು ಶೇಕ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ್ ನಾಯ್ಕ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಮಾಜಿ ಶಾಸಕ ಸತೀಶ್ ಸೈಲ್ ಮಧ್ಯ ಪ್ರವೇಶಿಸಿ ಎಲ್ಲರನ್ನ ಸಮಾಧಾನ ಪಡಿಸಿದರು.
ನಾನು ಮಾಡಿದ ಕೆಲಸವನ್ನ ಜನರಿಗೆ ತಿಳಿಸಿ: ಸತೀಶ್ ಸೈಲ್
ನಾನು ಶಾಸಕನಾಗಿದ್ದ ವೇಳೆಯಲ್ಲಿ ಕ್ಷೇತ್ರದಲ್ಲಿ ಮಾಡಿರುವ ಕಾರ್ಯಗಳ ಬಗ್ಗೆ ಜನರಿಗೆ ತಿಳಿಸುವ ಕಾರ್ಯ ಮಾಡಬೇಕು ಎಂದು ಸತೀಶ್ ಸೈಲ್ ಕಾರ್ಯಕರ್ತರ ಸಭೆಯಲ್ಲಿ ಹೇಳಿದರು.
ಮೆಡಿಕಲ್ ಕಾಲೇಜ್, ಕೆರವಡಿ-ಉಳಗಾ ಸೇತುವೆ, ನಗರಸಭೆ ಹೊಸ ಕಟ್ಟಡ, ಹೊಸ ಐಬಿ, ಮೀನು ಮಾರುಕಟ್ಟೆ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಮುಂತಾದ ಕಾಮಗಾರಿಗಳು ನನ್ನ ಅವಧಿಯಲ್ಲೇ ಮಂಜೂರಾಗಿವೆ. ಬಹು ವರ್ಷಗಳಿಂದ ಬಾಕಿ ಇದ್ದ ಸೀಬರ್ಡ್ ನಿರಾಶ್ರಿತರ ಹೆಚ್ಚುವರಿ ಪರಿಹಾರ ಕೊಡಲಿಸಲು ಕಾರಣನಾಗಿದ್ದೇನೆ. ನ್ಯಾಯಾಂಗ ಹೋರಾಟ ಮಾಡಿ ಕಾರವಾರ ಬಂದರು ಕಾಮಗಾರಿ ನಿಲ್ಲಿಸಲು ಕಾರಣನಾಗಿದ್ದೇನೆ. ಅವುಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಯಾವುದೇ ಸರ್ಕಾರ ಇದ್ದರೂ ನನಗೆ ಜನರ ಕೆಲಸ ಮಾಡುವ ತಾಕತ್ತಿದೆ. ಈಗಿನ ಶಾಸಕಿ ರೂಪಾಲಿ ನಾಯ್ಕ ಮಾತನಾಡುವುದು ಬಿಟ್ಟರೆ ಬೇರೆ ಕೆಲಸ ಮಾಡುತ್ತಿಲ್ಲ. ಕೇವಲ ಗುಮಟೆ ಪಾಂಗ್ ಬಾರಿಸುವುದರಿಂದ ಕೆಲಸ ಆಗುವುದಿಲ್ಲ ಎಂದು ಟೀಕಿಸಿದರು. ಕ್ರಿಮ್ಸ್ ಆಸ್ಪತ್ರೆ ಖಾಸಗಿ ಆಸ್ಪತ್ರೆಯಂತಾಗಿದೆ. ಕೆಲವು ವೈದ್ಯರನ್ನು ಬಿಟ್ಟು ಬೇರೆಯವರು ಬಡ ರೋಗಿಗಳಿಗೆ ಸ್ಪಂದಿಸುತ್ತಿಲ್ಲ. ದೂರುಗಳಿಗೆ ಜಿಲ್ಲಾಧಿಕಾರಿ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಬ್ಲಾಕ್ ಅಧ್ಯಕ್ಷರಾಗಿ ಸಮೀರ್ ಮುಂದುವರಿಕೆ: ಕಾರವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಸಭೆಯಲ್ಲಿ ಸರ್ವಾನುಮತದಿಂದ ಸಮೀರ್ ನಾಯ್ಕರನ್ನ ಮುಂದುವರೆಸಲಾಯಿತು. ಅಲ್ಲದೆ, ತಾಲೂಕಿನ ಪಕ್ಷದ ಆಗು ಹೋಗುಗಳಿಗೆ ಸ್ಪಂದಿಸಲು, ಸಹಲೆ ನೀಡಲು 11 ಜನ ಮುಖಂಡರ ಸಮಿತಿಯನ್ನು ಸಭೆಯಲ್ಲಿ ರಚಿಸಲಾಯಿತು.