ಶಿರಸಿ: ಸಾಮಾಜಿಕ ಮೌಲ್ಯಗಳು ಜೀವನಾದರ್ಶ, ಜೀವನ ಮೌಲ್ಯಗಳನ್ನೇ ಆಧರಿಸಿದೆ. ಸಮಸ್ಯೆಗಳ ಮೂಲವನ್ನು ಹುಡುಕಿದರೆ ಪರಿಹಾರದ ಚಿಂತನೆಗಳನ್ನು ಮಾಡಬಹುದಾಗಿದೆ ಎಂದು ಹಲ್ಲೆಕೊಪ್ಪದ ರಮಾನಂದರು ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮತ್ತು ನೆಮ್ಮದಿ ಕುಟೀರದ ಮಾಸದ ಮಾತು ಸಂಯುಕ್ತಾಶ್ರಯದಲ್ಲಿ ಸಾಮಾಜಿಕ ಮೌಲ್ಯಗಳ ಕುರಿತು ರಾಮಾಯಣ, ಮಹಾಭಾರತ, ಭಗವದ್ಗೀತೆಗಳನ್ನು ಉದಾಹರಿಸುತ್ತಾ ಮಾತನಾಡಿದ ಅವರು, ಸಾಮಾಜಿಕ ಜೀವನದಲ್ಲಿ ಅವಶ್ಯವಾಗಿ ಬೇಕಾಗಿರುವ ಮೌಲ್ಯಗಳ ಕುರಿತು ಆಳವಾದ ಅಧ್ಯಯನ ಅಗತ್ಯ. ಮನುಷ್ಯ ತನ್ನನ್ನು ತಾನು ಅರಿತುಕೊಂಡರೆ ಅವನ ಮೌಲ್ಯ ಹೆಚ್ಚಾಗಿ ಸಮಾಜದ ಮೌಲ್ಯಗಳು ಹೆಚ್ಚಾಗುತ್ತದೆ. ಆಹಾರ-ವಿಹಾರ, ವಿಚಾರಗಳಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ನುಡಿಯಲು ಮಾತ್ರ ಮೌಲ್ಯಗಳಿರದೆ ನಡೆಯಲ್ಲೂ, ಆಚರಣೆಯಲ್ಲೂ ತಂದರೆ ಅದಕ್ಕೊಂದು ಅರ್ಥ ಬರುತ್ತದೆ ಎಂದರು.
ನಂತರ ನಡೆದ ಸಂವಾದದಲ್ಲಿ ಮನೋಹರ ಮಲ್ಮನೆ, ಎ.ರಾಮ್ ಭಟ್ ಮತ್ತು ಜನಮೇಜಯರಾವ್ ಭಾಗವಹಿಸಿದ್ದರು. ಅಭಾಸಾಪ ರಾಜ್ಯ ಸಮಿತಿಯ ಜಗದೀಶ ಭಂಡಾರಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ನಮ್ಮ ಮೇಲೆ ಮುಂದಿನ ಜನಾಂಗದವರನ್ನು ಮೌಲ್ಯವಂತರನ್ನಾಗಿ ಮಾಡುವ ಹೊಣೆಯಿದೆ ಮತ್ತು ಅವರನ್ನು ಸಮಾಜಮುಖಿಗಳನ್ನಾಗಿ ಮಾಡುವುದು ನಮ್ಮ ಧರ್ಮ ಎಂದರು.
ದಾಕ್ಷಾಯಿಣಿ ಪಿ.ಸಿಯವರ ಪ್ರಾರ್ಥನೆಯಿಂದ ಕಾರ್ಯಕ್ರಮ ಆರಂಭವಾಯಿತು, ಗಣಪತಿ ಭಟ್ ವರ್ಗಾಸರ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಭಾಸಾಪ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕೃಷ್ಣ ಪದಕಿ ಎಲ್ಲರನ್ನು ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರೆ, ಡಿ.ಎಮ್.ಭಟ್ ಕುಳವೆ ವಂದಿಸಿದರು.