ಶಿರಸಿ: ತಾಲೂಕಿನ ನೆಗ್ಗು ಗ್ರಾ.ಪಂ. ವ್ಯಾಪ್ತಿಯ ಹತ್ತಕ್ಕೂ ಹೆಚ್ಚು ಹಳ್ಳಿಗಳ 15ಕ್ಕೂ ಹೆಚ್ಚು ಜನರಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ. ಕೃಷಿಕರು ಹೆಚ್ಚಿರುವ ತಟಗುಣಿ, ತುಡಗುಣಿ, ನಾಡಗುಳಿ ಮತ್ತಿಗಾರ ಸೇರಿದಂತೆ ಹಲವು ಊರುಗಳಲ್ಲಿ ರೋಗಬಾಧೆ ಕಾಡುತ್ತಿದೆ.
ಸರಾಸರಿ ನಾಲ್ಕರಿಂದ ಆರು ಮಂದಿಯಲ್ಲಿ ಕ್ಯಾನ್ಸರ್ ರೋಗ ಪತ್ತೆಯಾಗಿದೆ. ಸ್ತನ ಕ್ಯಾನ್ಸರ್, ಮೂಳೆ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಂಡಿದೆ. ಈಚಿನ ವರ್ಷದಲ್ಲಿ ಎಂಟಕ್ಕೂ ಹೆಚ್ಚು ಜನ ಇದೇ ಕಾಯಿಲೆಯಿಂದ ಮೃತಪಟ್ಟಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ. ನಗರದಿಂದ 15 ಕಿ.ಮೀ.ಗೂ ಹೆಚ್ಚು ದೂರದಲ್ಲಿ, ಹಚ್ಚಹಸಿರಿನ ಪ್ರಕೃತಿಯ ನಡುವೆ ಇರುವ ಈ ಎಲ್ಲ ಗ್ರಾಮಗಳಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತಿರುವುದು ಜನರಲ್ಲಿ ಆತಂಕ ಹುಟ್ಟಿಸಿದೆ. 38 ರಿಂದ 65 ವರ್ಷ ವಯೋಮಿತಿಯ ಕೆಲವರಲ್ಲಿ ಈ ಸಮಸ್ಯೆ ಕಾಣಿಸಿದ್ದು ರೋಗದ ಚಿಕಿತ್ಸೆಗೆ ದೂರದ ಮಂಗಳೂರು, ಹುಬ್ಬಳ್ಳಿ, ಬೆಂಗಳೂರಿನ ಆಸ್ಪತ್ರೆಗೆ ತೆರಳುವ ಅನಿವಾರ್ಯಕ್ಕೆ ಸಿಲುಕಿದ್ದಾರೆ.
‘ಎರಡು ವರ್ಷಗಳ ಹಿಂದೆ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ತೆರಳಿದ್ದಾಗ ವೈದ್ಯರು ಕ್ಯಾನ್ಸರ್ ಇರುವುದನ್ನು ದೃಢಪಡಿಸಿದ್ದರು. ಈಗ ಮಹಾನಗರದ ಆಸ್ಪತ್ರೆಗೆ ತಿಂಗಳಿಗೊಮ್ಮೆ ಅಲೆದಾಡುತ್ತಿದ್ದೇನೆ ಸಣ್ಣ ಹಿಡುವಳಿದಾರರಾಗಿರುವ ನಮಗೆ ಹೆಚ್ಚು ಆದಾಯವಿಲ್ಲ. ಚಿಕಿತ್ಸೆಗೆ ಸಾಲ ಮಾಡಿಕೊಂಡಿದ್ದೇವೆ’ ಎಂದು ಸಂತ್ರಸ್ತರೊಬ್ಬರು ಅಳಲು ತೋಡಿಕೊಂಡರು.
‘ತಂಬಾಕು ತಿಂದರೆ ಕ್ಯಾನ್ಸರ್ ಬರುವ ಭಯವಿದೆ. ಆದರೆ ಈ ಭಾಗದ ಕೆಲವು ಹಳ್ಳಿಗಳಲ್ಲಿ ತಂಬಾಕು ಸೇವಿಸದವರು, ಮಹಿಳೆಯರಲ್ಲೂ ಕ್ಯಾನ್ಸರ್ ಕಾಣಿಸಿಕೊಂಡಿದೆ. ಮೂರು ದಶಕಗಳ ಹಿಂದೆ ಇದ್ದ ಆರೋಗ್ಯಯುತ ವಾತಾವರಣ ಈಗಿಲ್ಲ’ ಎಂದು ಸಮಸ್ಯೆ ವಿವರಿಸುತ್ತಾರೆ ಸ್ಥಳೀಯ ಪ್ರಮುಖ ಕೆ. ಆರ್. ಹೆಗಡೆ ಅಮ್ಮಚ್ಚಿ.
ಸಮೀಕ್ಷೆ ಕೈಗೊಳ್ಳಲಾಗಿದೆ: ‘ನೆಗ್ಗು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೆಲವರಿಗೆ ಕ್ಯಾನ್ಸರ್ ಕಾಣಿಸಿಕೊಂಡಿರುವ ಮಾಹಿತಿ ಆಧರಿಸಿ ಸ್ಥಳೀಯವಾಗಿ ಸಮೀಕ್ಷೆ ನಡೆಸಲಾಗಿದೆ. ಕೆಲವರು ಚಿಕಿತ್ಸೆ ಪಡೆಯುತ್ತಿರುವ ಮಾಹಿತಿ ನೀಡಿದ್ದಾರೆ. ಐದಕ್ಕೂ ಹೆಚ್ಚು ಜನರು ವರ್ಷದ ಹಿಂದೆಯೇ ರೋಗದಿಂದ ಗುಣಮುಖರಾಗಿದ್ದಾರೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿನಾಯಕ ಭಟ್ಟ ತಿಳಿಸಿದರು.
‘ಗ್ರಾಮೀಣ ಭಾಗದ ಹಲವೆಡೆ ಕ್ಯಾನ್ಸರ್ ಪೀಡಿತರ ಸಂಖ್ಯೆ ಏರಿಕೆ ಆಗುತ್ತಿದೆ. ಆದರೆ ಬಹುತೇಕ ಸಂತ್ರಸ್ತರು ರೋಗದ ಮಾಹಿತಿ ನೀಡದೆ ಮುಚ್ಚಿಡುತ್ತಿದ್ದಾರೆ.ಸರ್ಕಾರ ಬಡವರಿಗೆ ಚಿಕಿತ್ಸೆಗೆ 5 ಲಕ್ಷದವರೆಗೆ ಸಹಾಯಧನ ಒದಗಿಸುತ್ತಿದ್ದು ಇದನ್ನು ಜನರಿಗೆ ತಿಳಿಸುತ್ತಿದ್ದೇವೆ’ ಎಂದರು.