ಶಿರಸಿ: ಈ ಮಹಾವಿದ್ಯಾಲಯದಿಂದ ಪದವಿ ಮುಗಿಸಿ ಹೋಗುತ್ತಿರುವ ನೀವು ನೆಮ್ಮದಿಯಿಂದ ಬಾಳಿ. ನೆಮ್ಮದಿಯನ್ನ ನಾವೇ ನಿರ್ಮಾಣ ಮಾಡಿಕೊಳ್ಳಬೇಕು. ಅದಕ್ಕಾಗಿ ಮಾನಸಿಕವಾಗಿ ಸಿದ್ದರಿರಬೇಕು ಎಂದು ಎಂ ಎಂ ಕಾಲೇಜಿನ ಉಪಸಮಿತಿ ಅಧ್ಯಕ್ಷರಾದ ಪ್ರೊ ಎಂ ಎಂ ಹೆಗಡೆ ಬಕ್ಕಳ ಹೇಳಿದರು.
ಅವರು ಎಂಇಎಸ್ ನ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ನೀವು ಮಾಡುವ ಕೆಲಸವನ್ನು ಶ್ರದ್ಧೆಯಿಂದ ನ್ಯಾಯಯುತವಾಗಿ ಮಾಡಿ. ಇಂದು ಸಮೂಹ ಮಾಧ್ಯಮ, ಸಾಮಾಜಿಕ ಜಾಲತಾಣಗಳು ಬಹಳ ಪ್ರಭಾವಿತವಾಗಿವೆ. ಹಿಂದೆಲ್ಲ ಪದವಿ ಮುಗಿದ ನಂತರ ಅಗಲಿಕೆಯ ನೋವು ಇರುತ್ತಿತ್ತು ಸಂಪರ್ಕವಿರುತ್ತಿರಲಿಲ್ಲ. ಆದರೆ ಇಂದು ಪರಿಸ್ಥಿತಿ ಹಾಗಿಲ್ಲ ಸಾಮಾಜಿಕ ಜಾಲತಾಣ ಎಲ್ಲರನ್ನ ಹತ್ತಿರವಾಗಿಸಿದೆ. ಇದು ಜೀವನವನ್ನು ನಿರೂಪಿಸಿಕೊಳ್ಳಲು ಸಹಕಾರಿಯಾಗಿದೆ. ಓದುವ ಸಂದರ್ಭದಲ್ಲಿ ಅಂತಸ್ತಿನ ಅರಿವೇ ಇರುವುದಿಲ್ಲ. ಅದು ಗೆಳೆತನಕ್ಕೂ ಬಾರಿಸುವುದಿಲ್ಲ. ಜೀವನದಲ್ಲಿ ಮುಂದೆ ಯಾವುದೇ ಅಂತಸ್ತಿನ ತರದಲ್ಲಿದ್ದರು ಅಹಂಮಿಕೆಯನ್ನು ಹೊಂದದೆ ಸಹಪಾಠಿಗಳೊಂದಿಗೆ ಸಂಪರ್ಕದಲ್ಲಿರಿ ಎಂದರು.
.
ಉಪಸಮಿತಿ ಸದಸ್ಯರಾದ ಲೋಕೇಶ್ ಹೆಗಡೆ ಮಾತನಾಡಿ ನೀವೆಲ್ಲಾ ಇಂದಿನವರೆಗೆ ವಿದ್ಯಾರ್ಥಿ ಜೀವನವನ್ನು ಅನುಭವಿಸಿದ್ದೀರಿ. ಇನ್ನು ನೀವು ಸಮಾಜದ ಜವಾಬ್ದಾರಿಯುತ ನಾಗರಿಕರಾಗಿದ್ದೀರಿ. ನಿಮ್ಮನ್ನ ಸಮಾಜ ನೋಡುವ ದೃಷ್ಟಿಕೋನ ಬೇರೆ ಆಗಿರುತ್ತದೆ ನಿಮ್ಮ ವಿದ್ಯಾರ್ಜನೆ ಸಮಾಜಕ್ಕೆ ಒಳಿತನ್ನ ಮಾಡಬೇಕು ಹಾಗೆ ನಿಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಿ ಎಂದರು.
ಪ್ರಾಚಾರ್ಯ ಡಾ ಟಿ ಎಸ್ ಹಳೆಮನೆ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೌಶಲ್ಯ ಪುರಿತವಾಗಿರುವುದು ಬಹಳ ಮುಖ್ಯ. ನಮ್ಮ ಎಂ ಎಸ್ ಎಸ್ ನ ಸ್ಕಿಲ್ ಲ್ಯಾಬ್ ಸದುಪಯೋಗವನ್ನು ನೀವು ಪಡೆದುಕೊಳ್ಳಿ ಉತ್ತಮ ಜೀವನವನ್ನು ಹೊಂದಿ ಎಂದು ಆಶಿಸಿದರು.
ಪ್ರಾಧ್ಯಾಪಕರುಗಳು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರೊ ರಾಘವೇಂದ್ರ ಹೆಗಡೆ ಸ್ವಾಗತಿಸಿದರು . ಪ್ರೊ ಎಂ ಎನ್ ಭಟ್ ವಂದಿಸಿದರು.