ಯಲ್ಲಾಪುರ: ಪಟ್ಟಣದ ಮೀನು ಮಾರುಕಟ್ಟೆಯ ಹೊರತಾಗಿ ಪಟ್ಟಣದ ವಿವಿಧೆಡೆ ಬೇಕಾಬಿಟ್ಟಿ ಮೀನುಮಾರಾಟ ನಡೆಯುತ್ತಿದ್ದು,ಈ ಬಗ್ಗೆ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳಬೇಕೆಂದು ಪ.ಪಂ ಸದಸ್ಯ ರಾಧಾಕೃಷ್ಣ ನಾಯ್ಕ ಆಗ್ರಹಿಸಿದರು.
ಅವರು ಸೋಮವಾರ ಪ.ಪಂ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಎಲ್ಲೆಂದರಲ್ಲಿ ಮೀನು ಮಾರಾಟ ಮಾಡುವುದರಿಂದ ಅನೈರ್ಮಲ್ಯ ಹೆಚ್ಚುತ್ತದೆ. ಮೀನು ಮಾರಾಟಕ್ಕೆಂದೇ ನಿರ್ಮಾಣವಾದ ಮಾರುಕಟ್ಟೆಯಲ್ಲಿ ಬೇಕಾದಷ್ಟು ಸ್ಥಳಾವಕಾಶ ಇದ್ದು,ಅಲ್ಲೇ ಮೀನು ಮಾರಾಟ ನಡೆಯಬೇಕು ಎಂದು ಒತ್ತಾಯಿಸಿದರು. ಅದಕ್ಕೆ ಸದಸ್ಯರು ಧ್ವನಿ ಗೂಡಿಸಿದರು.
ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಸಂಗನ ಬಸಯ್ಯ, ಒಬ್ಬೊಬ್ಬ ಸದಸ್ಯರು ಒಂದೊಂದು ನಿಲುವು ಹೊಂದಿದರೆ ಕ್ರಮ ಅಸಾಧ್ಯ. ಠರಾವು ಸ್ವೀಕರಿಸಿದರೆ ಕ್ರಮ ಕೈಗೊಳ್ಳಲಾಗುವುದೆಂದಾಗ ಎಲ್ಲ ಸದಸ್ಯರು ಕೈ ಎತ್ತಿ ಅನುಮೋದನೆ ಸೂಚಿಸಿದರು.
ಪಟ್ಟಣದ ಹೊರವಲಯದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೀನು ಮಾರುತ್ತಿರುವುದು ಕಂಡು ಬಂದಿದ್ದು,ಈ ಕುರಿತು ಸಮೀಪದ ಗ್ರಾ.ಪಂಗಳಿಗೆ ಕ್ರಮ ಕೈಗೊಳ್ಳಲು ಪತ್ರ ಬರೆಯಲಾಗುವುದು ಎಂದು ಮುಖ್ಯಾಧಿಕಾರಿ ಸಂಗನಬಸಯ್ಯ ಹೇಳಿದರು.
ಪ.ಪಂ ಅಧ್ಯಕ್ಷೆ ಸುನಂದಾ ದಾಸ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಟೆಂಡರ್ ಗಳಿಗೆ ವಿಶೇಷ ಚರ್ಚೆ ಇಲ್ಲದೇ ಅನುಮೋದನೆ ನೀಡಲಾಯಿತು.
ಐಡಿಎಸ್ ಎಂಟಿ ಯೋಜನೆ ನಿರ್ಮಿಸಿದ ಅಂಗಡಿ ಮಳಿಗೆ ಹಾಗೂ ಹತ್ತನೇಯ ಹಣಕಾಸು ಯೋಜನೆಯಲ್ಲಿ ನಿರ್ಮಿಸಿ ಕಾಲಿ ಇರುವ ಅಂಗಡಿ ಮಳಿಗೆ ನವೀಕರಿಸಿ ಟೆಂಡರ್ ಕರೆಯಲು ಸಭೆ ನಿರ್ಧರಿಸಿತು.ಉಪಾಧ್ಯಕ್ಷೆ ಶ್ಯಾಮಲಿ ಪಾಟಣಕರ್, ಸ್ಥಾಯಿ ಸಮಿತಿಯ ಅಧ್ಯಕ್ಷ ಆದಿತ್ಯ ಗುಡಿಗಾರ ಹಾಗೂ ಸದಸ್ಯರು ಭಾಗವಹಿಸಿದ್ದರು.