ಶಿರಸಿ: ಶಿರಸಿಯ ಸಾಂತ್ವನ ಮಹಿಳಾ ವೇದಿಕೆಯ ವಾರ್ಷಿಕ ಮಹಾಸಭೆ ಹಾಗೂ 10 ನೆಯ ವರ್ಷದ ಪಾರ್ವತಿ ವೈದ್ಯ ದತ್ತಿನಿಧಿ ಪುರಸ್ಕಾರ ಕಾರ್ಯಕ್ರಮವು ಸಾಂತ್ವನ ಸಹಾಯವಾಣಿಯ ಕಛೇರಿಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸ್ಥೆಯ ಗೌರವಾಧ್ಯಕ್ಷರಾದ ಬಿ ಕೆ ವೀಣಾಜಿಯವರು ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯರ ಸಶಕ್ತೀಕರಣದ ಅಂಗವಾಗಿ ಸಾಂತ್ವನ ಸಂಸ್ಥೆ ಅಸ್ತಿತ್ವಕ್ಕೆ ಬಂದಿದೆ. ನೊಂದ ಮಹಿಳೆಯರಿಗೆ ನ್ಯಾಯ ಸಿಗುವಲ್ಲಿ ಅವರ ಬೆನ್ನ ಹಿಂದೆ ನಿಂತು ಸಾಂತ್ವನ ಕೆಲಸ ಮಾಡುತ್ತಿದೆ. ಸಮಸ್ಯೆಗಳನ್ನು ಹೊತ್ತು ಬಂದವರ ಮಾಹಿತಿ ಗೌಪ್ಯವಾಗಿರುತ್ತದೆ. ಮಹಿಳೆ ಸುರಕ್ಷಿತವಾಗಿದ್ದರೆ ಸಮಾಜ ಸ್ವಾಸ್ಥ್ಯ ಇರುತ್ತದೆ.” ಎಂದರು.
ಇದೇ ಸಂದರ್ಭದಲ್ಲಿ ಕಳೆದ 9 ವರ್ಷಗಳಿಂದ ಅಂಗವಿಕಲ ಮಹಿಳೆಯರಿಗೆ ಕೊಡುತ್ತ ಬಂದಿರುವ ಪಾರ್ವತಿ ವೈದ್ಯ ದತ್ತಿನಿಧಿಯ ಪುರಸ್ಕಾರವನ್ನು ಸಾಂತ್ವನ ಮಹಿಳಾ ವೇದಿಕೆಯ ಸಲಹಾ ಸಮೀತಿಯ ಸದಸ್ಯರಾದ ರಾಮು ಕಿಣಿಯವರು , ಮೇಲಿನ ಓಣಿಕೇರಿ ಗ್ರಾಮದ ಲಲಿತಾ ತಿಮ್ಮಾ ಗೌಡ, ಕೆಂಗ್ರೆ ಅವರಿಗೆ ನೀಡಿದರು.
ಆರಂಭದಲ್ಲಿ ದತ್ತಿನಿಧಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಸಾಂತ್ವನ ಮಹಿಳಾ ವೇದಿಕೆಯ ಸಂಸ್ಥಾಪಕಾಧ್ಯಕ್ಷರಾದ ಶ್ರೀಮತಿ ವಿಜಯನಳಿನಿ, ದಾರುಣವಾದ ಅತ್ಯಾಚಾರ,ಅನಾಚಾರಗಳಿಗೆ ಸ್ಪಂದಿಸುವ ಒತ್ತಡದೊಂದಿಗೆ ಸಾಂತ್ವನ ಹುಟ್ಟಿದ್ದು. ಇಂತಹ ಒಂದು ಅಸಹಾಯಕತೆಯಲ್ಲಿಯೇ ಸಾಂತ್ವನದ ಆಶ್ರಯಕ್ಕೆ ಬಂದವರು ಪಾರ್ವತಿ ವೈದ್ಯ.
ಪಾರ್ವತಿ ವೈದ್ಯ ಯಾರ ಉಪಕಾರವನ್ನೂ ಬಿಟ್ಟಿಯಾಗಿ ಪಡೆಯುತ್ತಿರಲಿಲ್ಲ. ಆತ್ಮಾಭಿಮಾನ ಮತ್ತು ಕೃತಜ್ಞತೆಯನ್ನು ಹೊಂದಿರುವ ಮಹಿಳೆಯಾಗಿದ್ದಳು. ತಾನು ಅನಾಥೆಯಾಗಿ ಬೇರೆಯವರ ಮನೆಯಲ್ಲಿ ಮನೆಗೆಲಸವನ್ನು ಮಾಡುತ್ತಾ, ಸಂಕಷ್ಟ,ಸಂಕಟಗಳ ನಡುವೆಯೂ ಒಂದು ಪುಟ್ಟ ಗಂಟನ್ನು ಮಾಡಿ ಸಾಂತ್ವನಕ್ಕೆ ಕೊಟ್ಟಳು. ಹೀಗೆ ಉದಾತ್ತವಾಗಿ, ಉನ್ನತವಾಗಿ ಬದುಕಿದ ಅವಳ ಹೆಸರಿನಲ್ಲಿ ಈ ದತ್ತಿನಿಧಿಯನ್ನ ನೀಡುವ ಮೂಲಕ ಅವಳ ನೆನಪನ್ನು ಶಾಶ್ವತವಾಗಿಸುವ ಪ್ರಯತ್ನ ಇದು. ಪಾರ್ವತಿ ವೈದ್ಯ ದತ್ತನಿಧಿಯನ್ನು ಸಂಸಾರದ ಭಾರವನ್ನು ಹೊತ್ತು ನಡೆಸುತ್ತಿರುವ ವಿಶೇಷ ಚೇತನ ಮಹಿಳೆಯರಿಗೆ ಕೊಡುತ್ತ ಬಂದಿದ್ದೇವೆ ಎಂದರು.
ನಂತರ ಮಾತನಾಡಿದ ರಾಮುಕಿಣಿಯವರು,, “ಸಾಂತ್ವನವೆಂದರೆ ಸಂತೈಸುವದು.ಬೇರೆಯವರ ಕಷ್ಟವನ್ನು ಗುರುತಿಸುವದು ನಿಜವಾದ ಸಾಂತ್ವನ. ಹಣಕ್ಕಾಗಿ ಕೆಲಸ ಮಾಡದೇ ಸೇವೆಗಾಗಿ ಕೆಲಸ ಮಾಡುತ್ತಿರುವ ಸಾಂತ್ವನ ಸಾಮಾಜಿಕ ಸೇವೆಗೆ ಒಂದು ಮಾದರಿ. ನಾವೆಲ್ಲರೂ ಅಸಹಾಯಕರಿಗೆ ನಮ್ಮ ಸಂಪರ್ಕದ ಮೂಲಕ ಸೇವೆ ಸಲ್ಲಿಸುವ,ಸಹ್ಯ ಬದುಕನ್ನು ಒದಗಿಸುವ ಬ್ರಿಜ್’ಗಳಾಗೋಣ” ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಚೈತ್ರಾ ಹೆಗಡೆ ಪ್ರಾರ್ಥಿಸಿದರು. ಸಾಂತ್ವನ ವೇದಿಕೆಯ ಅಧ್ಯಕ್ಷರಾದ ಜ್ಯೋತಿ ಭಟ್ ಸ್ವಾಗತಿಸಿದರು.ಸಂಸ್ಥೆಯ ಕಾರ್ಯದರ್ಶಿ ಶೈಲಜಾ ಗೋರನ್ಮನೆ ವಾರ್ಷಿಕ ವರದಿಯನ್ನು ವಾಚಿಸಿದರು.ಖಜಾಂಚಿ ಮಧುಮತಿ ಹೆಗಡೆ ವಾರ್ಷಿಕ ಲೆಕ್ಕ- ಪತ್ರಗಳ ವರದಿ ನೀಡಿದರು.ಸಂಸ್ಥೆಯ ಉಪಾಧ್ಯಕ್ಷೆ ಸಂಧ್ಯಾ ಕುರುಡೇಕರ್ ದತ್ತಿನಿಧಿ ಫಲಾನುಭವಿಗಳ ಪರಿಚಯ ಮಾಡಿದರು. ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಉಷಾ ಶಹಾಣೆಯವರು ವಂದನಾರ್ಪಣೆಯನ್ನು ಸಲ್ಲಿಸಿದರು.
ಸಾಂತ್ವನ ಸಹಾಯವಾಣಿಯ ಆಪ್ತಸಮಾಲೋಚಕರಾದ ಪಲ್ಲವಿ ಹೆಗಡೆ ಸಹಾಯವಾಣಿಯ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಸಹಾಯವಾಣಿಯ ಸಾಮಾಜಿಕ ಕಾರ್ಯಕರ್ತೆಯರಾದ ಸ್ಮಿತಾ ಮುಕ್ರಿ ಮತ್ತು ಜಯಶ್ರೀ ಬೋವಿ ಕಾರ್ಯಕ್ರಮವನ್ನು ನಿರ್ವಹಿಸಿದರು.ಉಪಸಮೀತಿಯ ಸದಸ್ಯರು,ಸಲಹಾ ಸಮೀತಿಯ ಸದಸ್ಯರು ಉಪಸ್ಥಿತರಿದ್ದರು.