ಹೊನ್ನಾವರ: ಶರಾವತಿ ಅಳಿವೆಯಲ್ಲಿ ಹೂಳೆತ್ತದೇ ಸರಕಾರ ನಿರ್ಲಕ್ಷಿಸಿದ್ದು, ಇದರಿಂದಾಗಿ ಮೀನುಗಾರರ ಪ್ರಾಣ ಹಾನಿ ಮತ್ತು ಬೋಟ್ ಸೇರಿದಂತೆ ಲಕ್ಷಾಂತರ .ಬಲೆ ಹಾನಿಗೊಳಗಾಗುತ್ತಿದೆ.ಈ ಜಾಗ ಪ್ರತಿ ವರ್ಷವೂ ಮೀನುಗಾರರ ಪಾಲಿಗೆ ಮೃತ್ಯುಕೂಪದಂತಾಗಿದೆ.ಶರಾವತಿ ಅಳಿವೆಯಲ್ಲಿ ಹೂಳೆತ್ತಿ ಮೀನುಗಾರರ ಸಂಕಷ್ಟ ನಿವಾರಿಸಬೇಕೆಂದು ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್ ಆಗ್ರಹಿಸಿದ್ದಾರೆ.
ಶರಾವತಿ ಅಳಿವೆಯ ಹೂಳೆತ್ತುವ ಬಗ್ಗೆ ಕಳೆದ ಹಲವಾರು ವರ್ಷಗಳಿಂದ ಆಗ್ರಹಿಸುತ್ತಲೇ ಬರಲಾಗಿದೆ. ಆದರೆ ಸರಕಾರ ಮತ್ತು ಜನಪ್ರತಿನಿಧಿಗಳು ಈ ಮನವಿಯಲ್ಲಿ ಕೇಳಿಸಿಕೊಳ್ಳುತ್ತಲೇ ಇಲ್ಲ. ಅಲ್ಲದೇ ಪಕ್ಕದಲ್ಲಿ ವಾಣಿಜ್ಯ ಬಂದರು ನಿರ್ಮಾಣದ ಬೃಹತ್ ಯೋಜನೆಗೆ ಮುಂದಾದರೂ ಶರಾವತಿ ಅಳಿವೆಯ ಹೂಳೆತ್ತುವ ಕಾರ್ಯದ ಬಗ್ಗೆ ಲಕ್ಷ್ಯ ವಹಿಸುತ್ತಿಲ್ಲ, ಪ್ರತಿ ಮಳೆಗಾಲದಲ್ಲಿ ಅಳಿವೆಯಲ್ಲಿ ಹೂಳಿನಿಂದಾಗಿ ಬೋಟ್ ಸಂಚಾರ ಮಾರ್ಗ ಬದಲಾಗುತ್ತಲೇ ಇದ್ದು, ಇದರಿಂದಾಗಿ ದಿಕ್ಕು ತಪ್ಪಿ ಬೋಟ್‌ಗಳು ಅಪಾಯಕ್ಕೆ ಸಿಲುಕುತ್ತವೆ. ಅಲ್ಲದೇ ಜೀವ ಹಾನಿಯಾಗುತ್ತಿದೆ. ಇದರ ಪರಿಣಾಮವಾಗಿ ಮೀನುಗಾರಿಕೆ ಮೇಲೆ ಗಂಭೀರ ಪರಿಣಾಮವಾಗುತ್ತಿದೆ. ಅಲ್ಲದೇ ಮೀನುಗಾರಿಕೆ ವೃತ್ತಿ ಮಾಡುವವರು ಸಂಕಷ್ಟಕ್ಕೆ ಒಳಗಾಗುವಂತಾಗಿದೆ. ಮೀನುಗಾರರ ಅಳಲನ್ನು ಕೇಳುವವರೇ ಇಲ್ಲದ ಸ್ಥಿತಿ ನಿರ್ಮಾಣವಾಗಿದ್ದು, ಶರಾವತಿ ಅಳಿವೆಯ ಹೂಳು ತೆಗೆದು ಮೀನುಗಾರರ ಪ್ರಾಣ ಹಾನಿ ತಪ್ಪಿಸುವ ಕಾರ್ಯ ಇನ್ನಾದರೂ ಮಾಡಿ ಎಂದು ಮೀನುಗಾರಿಕೆ ಸಚಿವರು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಬಳಿ ಆಗ್ರಹಿಸುವುದಾಗಿ ರಾಜು ತಾಂಡೇಲ್ ಹೇಳಿದ್ದಾರೆ.