ಭಟ್ಕಳ: ಚುನಾವಣಾ ಆಯೋಗದ ನಿರ್ದೇಶನದಂತೆ ಆಧಾರ್ ಕಾರ್ಡ್’ನೊಂದಿಗೆ ಚುನಾವಣಾ ಗುರುತಿನ ಚೀಟಿಯನ್ನು ಜೋಡಣೆ ಮಾಡಿಕೊಳ್ಳುವ ಮೂಲಕ ಎಲ್ಲಾ ಸಾರ್ವಜನಿಕರು ಸಹಕರಿಸುವಂತೆ ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ ಕೋರಿದ್ದಾರೆ.
ಪ್ರತಿಯೋರ್ವ ಮತದಾರರೂ ಕೂಡಾ ತಮ್ಮ ಮತದಾರರ ಗುರುತಿನ ಚೀಟಿಯನ್ನು ಆಧಾರ್ ಕಾರ್ಡ್’ನೊಂದಿಗೆ , ಇಲ್ಲವೇ ತಮ್ಮ ಇತರೆ ಗುರುತಿನ ಚೀಟಿಯೊಂದಿಗೆ ಜೋಡಣೆ ಮಾಡಿಕೊಳ್ಳುವುದು ಅವಶ್ಯಕವಾಗಿದೆ. ಪ್ರತಿಯೋರ್ವರೂ ತಮ್ಮ ಮೊಬೈಲ್‌ನಿಂದ, ತಹಶೀಲ್ದಾರ್ ಕಚೇರಿ, ಪುರಸಭಾ ಕಚೇರಿಯಲ್ಲಿ ತೆರೆದಿರುವ ಕೌಂಟರ್‌ನಲ್ಲಿ ಇಲ್ಲವೇ ಬಿಎಲ್‌ಒಗಳು ನಿಮ್ಮಲ್ಲಿಗೆ ಬಂದಾಗ ಜೋಡಣೆ ಮಾಡಿಕೊಳ್ಳಬೇಕು.
ಸರಕಾರ ಮತ್ತು ಚುನಾವಣಾ ಆಯೋಗವು ಚುನಾವಣಾ ಮತದಾರರ ಪಟ್ಟಿಯನ್ನು ಶುದ್ಧಗೊಳಿಸಲಿಕ್ಕೋಸ್ಕರ ಈ ಒಂದು ಕ್ರಮಕ್ಕೆ ಮುಂದಾಗಿದ್ದು, ಆಧಾರ್ ಇಲ್ಲವೇ ಗುರುತಿನ ಚೀಟಿಯನ್ನು ನಿಮ್ಮ ಮತದಾರರ ಗುರುತಿನ ಚೀಟಿಯೊಂದಿಗೆ ಜೋಡಣೆ ಮಾಡುವುದರಿಂದ ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಯಾಗಿದ್ದರೆ ಅದನ್ನು ಪತ್ತೆ ಹಚ್ಚುವುದು ಸುಲಭವಾಗುತ್ತದೆ.
ಅಲ್ಲದೇ ಮುಂದಿನ ಚುನಾವಣಾ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಲು ಕೂಡಾ ಇದು ಬಹಳ ಸಹಕಾರಿಯಾಗುತ್ತದೆ. ಪ್ರತಿಯೋರ್ವ ಮತದಾರರು ಕೂಡಾ ವಿಳಂಬ ಮಾಡದೇ ಆಧಾರ್ ಇಲ್ಲದೇ ಗುರುತಿನ ಚೀಟಿಯನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಜೋಡಣೆ ಮಾಡಿಕೊಳ್ಳಿ ಎಂದೂ ಅವರು ಕರೆ ನೀಡಿದ್ದಾರೆ.
ಆಧಾರ್ ಕಾರ್ಡ್ ಜೊತೆ ವೋಟಿಂಗ್ ಕಾರ್ಡ್ ಲಿಂಕ್ ಮಾಡಿಸಿಕೊಳ್ಳಿ: ಗೋವಿಂದ ನಾಯ್ಕ
