ದಾಂಡೇಲಿ: ನಗರದ ಹಳೆದಾಂಡೇಲಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಾಲೇಜಿನ ವಿದ್ಯಾರ್ಥಿನಿಯರಿಗಾಗಿ ಇನ್ನರ್‌ವ್ಹೀಲ್ ಕ್ಲಬ್ ಆಶ್ರಯದಡಿ ಆರೋಗ್ಯ ಮತ್ತು ನೈರ್ಮಲ್ಯ ನಿರ್ವಹಣೆಯ ಬಗ್ಗೆ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು.
ಇನ್ನರ್‌ವ್ಹೀಲ್ ಕ್ಲಬ್‌ನ ಅಧ್ಯಕ್ಷೆ ನೇಹಾ ಕಾಮತ್ ಉದ್ಘಾಟಿಸಿ ಮಾತನಾಡುತ್ತಾ, ವಿದ್ಯಾರ್ಥಿನಿಯರು ತಮ್ಮ ಆರೋಗ್ಯ ಸಂರಕ್ಷಣೆಯ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿಕೊಳ್ಳಬೇಕು. ಆರೋಗ್ಯವೆ ಎಲ್ಲದಕ್ಕೂ ಮೂಲ. ಸಮೃದ್ದ ಆರೋಗ್ಯದಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದರು.
ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದ ಆರೋಗ್ಯ ಇಲಾಖೆಯ ನಿವೃತ್ತ ಆರೋಗ್ಯ ಅಧೀಕ್ಷಕಿ ಪ್ರೇಮಾ ಬಾವಾಜಿ, ಹೆಣ್ಣು ಹಲವಾರು ಹಂತಗಳನ್ನು ದಾಟಿ ಬರಬೇಕು. ಈ ನಡುವೆ ಆರೋಗ್ಯದ ಬಗ್ಗೆ ವಿಶೇಷ ಕಾಳಜಿಯಿರಬೇಕು. ಯಾವುದಕ್ಕೂ ಕೀಳರಿಮೆ ಬೇಡ. ಸ್ವಚ್ಚತೆಯ ಬಗ್ಗೆ ಹೆಚ್ಚಿನ ಗಮನ ನೀಡಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯೆ ನಾಗರೇಖಾ ಗಾಂವಕರ, ಇನ್ನರ್‌ವ್ಹೀಲ್ ಕ್ಲಬ್‌ನವರು ಅವಶ್ಯ ಕಾರ್ಯಕ್ರಮವನ್ನು ಆಯೋಜಿಸಿರುವುದು ಔಚಿತ್ಯಪೂರ್ಣವಾಗಿದೆ ಎಂದರು.
ಸಂವಾದ ಕಾರ್ಯಕ್ರಮದಲ್ಲಿ ಡಾ.ಜಹೇರಾ ದಫೇದಾರ, ಇನ್ನರ್ ವೀಲ್ ಕ್ಲಬಿನ ನಿಕಟಪೂರ್ವ ಅಧ್ಯಕ್ಷೆ ರೇಷ್ಮಾ ಬಾವಾಜಿ, ಪ್ರಾಧ್ಯಾಪಕಿ ಡಾ.ತೃಪ್ತಿ ನಾಯಕ, ಉಪನ್ಯಾಸಕರಾದ ಸುಮಂಗಲಾ ನಾಯಕ, ಶೃತಿ ಪಾಟೀಲ್ ಭಾಗವಹಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಉಪನ್ಯಾಸಕಿಯರಾದ ರಾಧಿಕಾ ಚೋಪಡೆ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಗೌರಿ ಚಲವಾದಿ ವಂದಿಸಿದರು. ಸುಮಯ್ಯಾ ಶೇಖ ಕಾರ್ಯಕ್ರಮ ನಿರೂಪಿಸಿದರು.