ಹೊನ್ನಾವರ: ಹೃದಯಘಾತವಾದಂತಹ ಸಂದರ್ಭದಲ್ಲಿ ತುರ್ತಾಗಿ ಹೃದಯ ಮತ್ತು ಶ್ವಾಸಕೋಶವನ್ನು ಪುನರಜ್ಜೀವನಗೊಳಿಸುವ ಸಿಪಿಆರ್ ನೀಡಿದರೆ ಪ್ರಾಣಾಪಾಯದಿಂದ ವ್ಯಕ್ತಿಯನ್ನು ಬದುಕಿಸಬಹುದಾಗಿದೆ. ಜನಸಾಮಾನ್ಯರು ಈ ಸಿಪಿಆರ್ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಂಡಿರಬೇಕು ಎಂದು ತಾಲೂಕು ಆಸ್ಪತ್ರೆಯ ಹೃದಯ ರೋಗ ತಜ್ಞ ಡಾ. ಪ್ರಕಾಶ ನಾಯ್ಕ ಹೇಳಿದರು.
ತಾಲೂಕು ಆಸ್ಪತ್ರೆಯಲ್ಲಿ ನಡೆದ ಹೃದಯಾಘಾತ ಮತ್ತು ಹೃದಯ ಸ್ತಂಭನ ಕುರಿತ ಮಾಹಿತಿ ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ತರಬೇತಿ ನೀಡಿದರು.
ವೈದ್ಯಕೀಯ ಚಿಕಿತ್ಸೆ ಸಿಗುವವರೆಗೆ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಗೆ ತುರ್ತಾಗಿ ಸಿಪಿಆರ್ ನೀಡುವುದು ಅಗತ್ಯವಾಗಿದೆ. ಮನೆಯಲ್ಲಿ ಅಥವಾ ಆಸ್ಪತ್ರೆ ಹೊರಗೆ ಹೃದಯಘಾತವಾದಾಗ ಕುಟುಂಬಸ್ಥರು ಅಥವಾ ಸಾರ್ವಜನಿಕರು ಅಂಬ್ಯುಲೆನ್ಸ್ಗೆ ಕಾಯುತ್ತಾರೆ ಹೊರತು ಸಿಪಿಆರ್ ನೀಡುವ ಬಗ್ಗೆ ಗಮನ ನೀಡುವುದಿಲ್ಲ. ಸಿಪಿಆರ್ ನೀಡಲು ವಿಶೇಷ ತರಬೇತಿ, ಸರ್ಟಿಫಿಕೆಟ್ ಬೇಕಿಲ್ಲ. ಅದರ ಬಗ್ಗೆ ತಿಳಿದುಕೊಂಡಿದ್ದರೆ ಪಾಲನೆ ಮಾಡಿದರೆ ಬದುಕುಳಿಯುವ ಸಾಧ್ಯತೆ ಹೆಚ್ಚಿದೆ ಎಂದರು.
ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ ಕಿಣಿ, ಇಂತಹ ತರಬೇತಿ ಕಾರ್ಯಗಾರಗಳು ನಮ್ಮ ಕೌಶಲ್ಯಗಳನ್ನು ಮತ್ತು ಜ್ಞಾನಗಳನ್ನು ಹೆಚ್ಚಿಸಿಕೊಳ್ಳಲು ಅನೂಕೂಲವಾಗುತ್ತದೆ. ಡಾ.ಪ್ರಕಾಶ ನಾಯ್ಕರವರು ಸಿಬ್ಬಂದಿಗಳಿಗೆ ಉತ್ತಮ ತರಬೇತಿಯನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಮತ್ತಷ್ಟು ತರಬೇತಿಗಳು ಸಿಬ್ಬಂದಿಗಳಿಗೆ ಸಿಗುವಂತೆ ಮಾಡಲಾಗುವುದು ಎಂದು ಹೇಳಿದರು.
ಹೃದಯಘಾತವಾದ ವ್ಯಕ್ತಿಗೆ ಹೇಗೆ ಸಿಪಿಆರ್ ಪ್ರಕ್ರಿಯೆ ನಡೆಸಬೇಕು ಎನ್ನುವದನ್ನು ವಿವಿಧ ಚಟುವಟಿಕೆಗಳ ಮೂಲಕ ತೋರಿಸಿಕೊಡಲಾಯಿತು. ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮೂಲಕ ವಿವರವಾಗಿ ಮಾಹಿತಿಯನ್ನು ನೀಡಿದರು. ಆಸ್ಪತ್ರೆಯ ಎಲ್ಲ ವೈದ್ಯರು ಮತ್ತು ಸಿಬ್ಬಂದಿ ವರ್ಗ ತರಬೇತಿ ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು.