Slide
Slide
Slide
previous arrow
next arrow

‘ಟಿಆರ್‌ಸಿ’ ಕುಟುಂಬ-ಸದಸ್ಯ-ಸಂಘಗಳ ಅವಿನಾಭಾವ ಸಂಬಂಧಕ್ಕೆ ಸಾಕ್ಷಿಯಾಗಿದೆ: ರಾಮಕೃಷ್ಣ ಹೆಗಡೆ

300x250 AD

ಶಿರಸಿ: ದಿ ತೋಟಗಾರ್ಸ್ ರೂರಲ್ ಕೋ-ಆಪರೇಟಿವ್ ಅಗ್ರಿಕಲ್ಚರಲ್ ಕ್ರೆಡಿಟ್ ಸೊಸೈಟಿಯ 109ನೇಯ ವಾರ್ಷಿಕ ಸರ್ವ ಸಾಧಾರಣ ಸಭೆಯು ಗುರುವಾರ ನಗರದ ಟಿಆರ್‌ಸಿ ಸಭಾಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ರಾಮಕೃಷ್ಣ ಶ್ರೀಪಾದ ಹೆಗಡೆ, ಕಡವೆ ಮಾತನಾಡಿ, ನಮ್ಮ ಸಂಘವು ಶತಮಾನಗಳನ್ನು ಸಹಕಾರ ವ್ಯವಸ್ಥೆಯಲ್ಲಿ ಪೂರ್ಣಗೊಳಿಸಿ, ಶತಮಾನೋತ್ತರ ದಶಕದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕುಟುಂಬ-ಸದಸ್ಯ-ಸಂಘ ಇವುಗಳ ಅವಿನಾಭಾವ ಸಂಬಂಧಕ್ಕೆ ಸಾಕ್ಷಿಯಾಗಿದೆ ಎಂದರು.
ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ಉಪಯೋಗವಾಗುವಂತಹ ಹಾಗೂ ಅವರ ಆದಾಯವನ್ನು ಹೆಚ್ಚಿಸಿ, ಕೃಷಿಯನ್ನು ಸುಸ್ಥಿರಗೊಳಿಸುವ ಮತ್ತು ಕೃಷಿಯನ್ನು ಯಾಂತ್ರೀಕರಣ ಗೊಳಿಸುವ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ರೈತ ಉತ್ಪಾದಕ ಕಂಪನಿಯನ್ನು ನಮ್ಮ ಸಂಘದ ಪ್ರೇರಣೆಯಿಂದ ತೋಟಗಾರ್ಸ ಗ್ರೀನ್ ಗ್ರೂಪ್ ಫಾಮರ‍್ಸ್ ಪ್ರೊಡ್ಯೂಸರ್ ಕಂಪನಿ ಎನ್ನುವ ಹೆಸರಿನಲ್ಲಿ ಸ್ಥಾಪಿಸಲಾಗಿದೆ. ಈಗಾಗಲೇ ಈ ಸಂಸ್ಥೆ ದೋಟಿಯಲ್ಲಿ ಅಡಿಕೆಗೆ ಮದ್ದು ಸಿಂಪಡಣೆ, ಕೂಲಿ ಕಾರ್ಮಿಕರ ಒದಗಿಸುವಿಕೆ, ಹಾಗೂ ರಸಮೇವು ಒದಗಿಸುವ ಕಾರ್ಯ ಚಟುವಟಿಕೆಗಳನ್ನು ಕೈಗೊಂಡಿದೆ. ಮುಂಬರುವ ದಿನಗಳಲ್ಲಿ ರೈತರಿಗೆ ಇನ್ನೂ ಹೆಚ್ಚಿನ ಸೇವೆಗಳನ್ನು ಈ ಕಂಪನಿಯ ಮೂಲಕ ಒದಗಿಸಲಾಗುತ್ತದೆ. ಹೆಚ್ಚಿನ ಸದಸ್ಯರು ಈ ಸಂಸ್ಥೆಯ ಶೇರು ಸದಸ್ಯತ್ವ ಪಡೆದು ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು.
ಸದಸ್ಯರಿಗೆ ಅನುಕೂಲವಾಗುವಂತೆ ದಿನಾಂಕ 01.04.2021 ರಿಂದ ಸಂಘದ ಸ್ವಂತ ಬಂಡವಾಳದಿಂದ ನೀಡುವ ಅಲ್ಪಾವದಿ ಕೃಷಿ ಅಭಿವೃದ್ಧಿ ಸಾಲ, ಕೃಷಿಯೇತರ ಮಾಧ್ಯಮಿಕ ಸಾಲ ಹಾಗೂ ವಾಹನ ಸಾಲಗಳಿಗೆ ಶೇ.1ರಷ್ಟು ಬಡ್ಡಿದರವನ್ನು ಕಡಿಮೆಗೊಳಿಸಲಾಗಿದೆ. ಇದರೊಂದಿಗೆ ಸಂಘದಲ್ಲಿ ಆರ್ಥಿಕವಾಗಿ ದುರ್ಬಲರಿರುವ ಸದಸ್ಯರ ಪ್ರತಿಭಾವಂತ ಮಕ್ಕಳು ವೃತ್ತಿಪರ ಉನ್ನತ ವ್ಯಾಸಂಗ ಕೈಗೊಂಡು ಆದಾಯಗಳಿಸುವಂತಾಗಲು ವೃತ್ತಿಪರ ಉನ್ನತ ಶಿಕ್ಷಣ ಸಾಲವನ್ನೂ ಸಹ ಸಂಘದಿಂದ ನೀಡಲಾಗುತ್ತಿದೆ. ಈ ಸಾಲದ ಪ್ರಯೋಜನವನ್ನು ಪಡೆದುಕೊಂಡು ಸದಸ್ಯರ ಮಕ್ಕಳು ತಮ್ಮ ಶಿಕ್ಷಣದಿಂದ ವಂಚಿತರಾಗದೇ ಪ್ರತಿಭೆ ಅನಾವರಣಗೊಳಿಸಿ ಕುಟುಂಬದ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಬೇಕೆಂದರು.
ಸಂಘದಲ್ಲಿ ಠೇವಣಿಗೆ ಸಹ ಆಕರ್ಷಕ ಬಡ್ಡಿ ನೀಡಲಾಗುತ್ತಿದೆ. ಇತ್ತೀಚೆಗೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಠೇವಣಿ ಬಡ್ಡಿದರ ಇಳಿಮುಖವಾಗುತ್ತಿದ್ದರೂ ಸಹ ನಾವು ಸದಸ್ಯರ ಠೇವಣಿಗೆ ಹೆಚ್ಚಿನ ಪ್ರಮಾಣದಲ್ಲಿ ಬಡ್ಡಿಯನ್ನು ನೀಡುತ್ತಿದ್ದೇವೆ ಎಂದು ರಾಮಕೃಷ್ಣ ಹೆಗಡೆ ಕಡವೆ ಹೇಳಿದರು.
ಸಂಜೀವಿನಿ ನಿಧಿ: ಸದಸ್ಯರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೃಷಿಕರ ಭವಿಷ್ಯದ ಬಧ್ರತೆಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸಂಘದ ಸದಸ್ಯರ ಸಂಕಷ್ಟದ ಪರಿಸ್ಥಿತಿಯಲ್ಲಿ ನೆರವಾಗಲು ಅನುಕೂಲವಾಗುವಂತೆ ’ಸಂಜೀವಿನಿ’ ನಿಧಿಯನ್ನು ಜಾರಿಗೊಳಿಸಲಾಗಿದೆ. ಈಗಾಗಲೇ ಸುಮಾರು 1.10 ಕೋಟಿಯಷ್ಟು ಹಣ ಈ ನಿಧಿಗೆ ಸಂಗ್ರಹಗೊಂಡಿದೆ. ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳ್ಳಲು ಕನಿಷ್ಟ 5 ಕೋಟಿ ರುಪಾಯಿಯಷ್ಟು ಪ್ರಾರಂಭಿಕ ಬಂಢವಾಳದ ಅವಶ್ಯಕತೆ ಇದೆ. ಆಸಕ್ತರು ಈ ನಿಧಿಗೆ ವಂತಿಗೆ ನೀಡಿ ಸಹಕರಿಸಲು ವಿನಂತಿಸಿದರು.
ಸದಸ್ಯರಿಗೆ ಕೊಡುಗೆ: ಸಂಘದ ಮೂಲಕ 2021.22ನೇ ಸಾಲಿನಲ್ಲಿ 39 ಕೋಟಿ ರೂ.ಗೂ ಅಧಿಕವಾಗಿ ತಮ್ಮ ಕೃಷಿ ಹುಟ್ಟುವಳಿಗಳನ್ನು ಸದಸ್ಯರು ವಿಕ್ರಯಿಸಿದ್ದಾರೆ. ಈ ವಿಕ್ರಿ ವ್ಯವಹಾರ ಹಾಗೂ ’ಪತ್ತು ಮಾರಾಟ ಜೋಡಣೆ’ಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ವಿಕ್ರಿ ಮಾಡಿದ ಸದಸ್ಯರಿಗೆ ಕಳೆದ ಹಲವು ವರ್ಷಗಳಿಂದ ಪ್ರೋತ್ಸಾಹನ ರೀತಿಯಲ್ಲಿ ವಸ್ತುಗಳನ್ನು ಸಂಘವು ನೀಡುತ್ತಾ ಬಂದಿದೆ ಎಂದರು.
ಇದೇ ಸಂದರ್ಭದಲ್ಲಿ ಸಂಘದ ಹನ್ನೊಂದು ಹಿರಿಯ ಸದಸ್ಯರಿಗೆ ‘ಉತ್ತಮ ಸದಸ್ಯ’ ಹಾಗೂ ಇಬ್ಬರು ಸದಸ್ಯರಿಗೆ ‘ಉತ್ತಮ ಕೃಷಿಕ ಸದಸ್ಯ’ ಎಂದು ಮತ್ತು ಸಂಘದಿಂದ ಸೇವಾ ನಿವೃತ್ತಿ ಹೊಂದಿದ ಮಂಜುನಾಥ ಟಿ ಮಡಿವಾಳ ಹಾಗೂ ಜಯಣ್ಣ ಬಿ. ಮಾಳೆಕೊಪ್ಪ ಅವರನ್ನು ಅಭಿನಂದಿಸಿ ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷರಾದ ಲೋಕೇಶ ಹೆಗಡೆ ಹುಲೇಮಳಗಿ ಹಾಗೂ ಎಲ್ಲ ನಿರ್ದೇಶಕರು ಹಾಗೂ ಲೆಕ್ಕಪರಿಶೋಧಕರಾದ ಆರ್.ಎನ್. ಹೆಗಡೆ, ಯಲ್ಲಾಪುರ ವೇದಿಕೆಯಲ್ಲಿದ್ದರು.
ದಿವಂಗತ ಶ್ರೀಪಾದ ಹೆಗಡೆ ಕಡವೆ ಸ್ಮರಣಾರ್ಥ ಹಾಗೂ 1971 ರಿಂದ 2005ರವರೆಗೆ ವಿವಿಧ ಅವಧಿಯಲ್ಲಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ದಿವಸ್ಪತಿ ದೇವೇಂದ್ರ ವಿಶ್ವಾಮಿತ್ರ ಓಣಿಗದ್ದೆ ಅವರ ಸ್ಮರಣಾರ್ಥ ಸಭೆಯಲ್ಲಿ ಮೌನಾಚರಣೆ ಮಾಡಲಾಯಿತು.
ಸಂಘದ ಮಹಿಳಾ ಸಿಬ್ಬಂದಿ ಪ್ರಾರ್ಥಿಸಿದರು. ಮುಖ್ಯ ಕಾರ್ಯನಿರ್ವಾಹಕರಾದ ರಮೇಶ ಹೆಗಡೆ, ಬಾಳೆಗದ್ದೆ, ಹಾಗೂ ಇನ್ಸ್ಪೆಕ್ಟರ್ ಕಿರಣ ಭಟ್, ಮಾವಿನಕೊಪ್ಪ ವಾರ್ಷಿಕ ವರದಿ ವಾಚಿಸಿದರು. ಜಿ.ಜಿ. ಹೆಗಡೆ, ಕುರುವಣಿಗೆ ನಿರ್ವಹಿಸಿದರು. ಸಂಘದ ನಿರ್ದೇಶಕರಾದ ವಿ.ಜಿ. ಹೆಗಡೆೆ, ಸೋಮ್ನಳ್ಳಿ ವಂದಿಸಿದರು.

ಇತ್ತೀಚೆಗೆ ಸಹಕಾರಿ ಸಂಘಗಳ ಹಾಗೂ ಅದರ ಪದಾಧಿಕಾರಿಗಳ ಕುರಿತು ಅವಾಸ್ತವಿಕ ವಾಟ್ಸ್ಅಪ್ ಸಂದೇಶಗಳು ಹರಿದಾಡುತ್ತಿದೆ. ಇಂತಹ ಸಂದೇಶಗಳನ್ನು ಸದಸ್ಯರು ಗಂಭೀರವಾಗಿ ಪರಿಗಣಿಸಬಾರದು. ಇಂತಹ ಸಂದೇಶಗಳನ್ನು ಹರಿಬಿಡುವವರ ವಿರುದ್ಧ ಈಗಾಗಲೇ ಪ್ರಕರಣವನ್ನು ಸಹ ದಾಖಲಿಸಲಾಗಿದೆ. ಆದ್ದರಿಂದ ಸದಸ್ಯರು ಅಂತಹ ಸಂದೇಶಗಳನ್ನು ಫಾರ್‌ವರ್ಡ್ ಮಾಡದೇ ಅಳಿಸಿಹಾಕಬೇಕು ಎಂದು ರಾಮಕೃಷ್ಣ ಹೆಗಡೆ ಕಡವೆ ಹೇಳಿದರು.

ಕೋಟ್:
2018ರಲ್ಲಿ ರಾಜ್ಯ ಸರ್ಕಾರ ಘೋಷಿಸಿದ ರೂ. 1ಲಕ್ಷದವರೆಗಿನ ಬೆಳೆಸಾಲ ಮನ್ನಾ ಇನ್ನೂ ಸಹ ಅನೇಕ ರೈತರಿಗೆ ಬಂದಿರುವುದಿಲ್ಲ. ಸಂಘವು ಈ ಬಗ್ಗೆ ನಿರಂತರವಾಗಿ ಪ್ರಯತ್ನಿಸುತ್ತಿದೆ. ಸರಕಾರದ ಮಟ್ಟದಲ್ಲಿ ಈಗಾಗಲೇ ಈ ಬಗ್ಗೆ ಚಾಲನೆಯೂ ದೊರಕಿದೆ ಎನ್ನಲಾಗಿದೆ. ಅರ್ಹ ಫಲಾನುಭವಿಗಳಿಗೆ ಮನ್ನಾ ಹಣ ಶೀಘ್ರ ದೊರಕುವ ವಿಶ್ವಾಸವಿದೆ.

300x250 AD
  • ರಾಮಕೃಷ್ಣ ಶ್ರೀಪಾದ ಹೆಗಡೆ, ಕಡವೆ, ಅಧ್ಯಕ್ಷರು, ಟಿಆರ್‌ಸಿ
Share This
300x250 AD
300x250 AD
300x250 AD
Back to top