• Slide
    Slide
    Slide
    previous arrow
    next arrow
  • ಸ್ವಹಿತ ತ್ಯಾಗ ಮಾಡಿ ಪರರ ಕಷ್ಟಕ್ಕೆ ಸ್ಪಂದಿಸಿ : ರಾಘವೇಶ್ವರ ಶ್ರೀ ಕರೆ

    300x250 AD

    ಗೋಕರ್ಣ: ಪ್ರೇಮ ಇದ್ದಲ್ಲಿ ಕರುಣೆ ಇರುತ್ತದೆ. ನಮ್ಮ ಹಿತವನ್ನು ತ್ಯಾಗ ಮಾಡಿಯಾದರೂ, ಪರರ ಕಷ್ಟಕ್ಕೆ ಸ್ಪಂದಿಸಬೇಕು. ಇಂಥ ಗುಣಗಳನ್ನು ಪ್ರಾಣಿ, ಪಕ್ಷಿಗಳಿಂದ, ಲೋಕನಾಯಕ ಶಿವನಿಂದ ಪಡೆಯೋಣ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು.

    ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಸೋಮವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಪ್ರೇಮ ಹಾಗೂ ಕರುಣೆ ಪತಿ-ಪತ್ನಿ ಇದ್ದಂತೆ. ಜಗತ್ತಿನ ಮೇಲೆ ಪ್ರೀತಿ ಇಟ್ಟಿರುವ ಭಗವಂತ ಅಂಥ ಕರುಣೆಯನ್ನು ಜಗತ್ತಿನ ಎಲ್ಲ ಜೀವ ಜಂತುಗಳ ಮೇಲೆ ಹೊಂದಿರುತ್ತಾನೆ. ಇನ್ನೊಬ್ಬರ ಕಷ್ಟ ಪರಿಹಾರ ಮಾಡುವ ಸಲುವಾಗಿ ತಾವೇ ಸಂಕಷ್ಟವನ್ನು ತೆಗೆದುಕೊಳ್ಳುವವರು ಸತ್ಪುರುಷರು ಎಂದು ಬಣ್ಣಿಸಿದರು.

    ಕರುಣಾಮೂರ್ತಿಗಳಾದ ಎಷ್ಟೋ ಸಂತರು ಬೇರೆಯವರ ಕಷ್ಟಗಳನ್ನು ತಾವೇ ಆವಾಹನೆ ಮಾಡಿಕೊಳ್ಳುತ್ತಾರೆ. ಪ್ರಪಂಚದ ಕಷ್ಟಗಳನ್ನು ರಾಮ, ಕೃಷ್ಣ, ಶಂಕರಾಚಾರ್ಯರು ಹೀಗೆ ಎಷ್ಟೋ ಮಹಾಪುರುಷರು ತಾವೇ ಪಡೆದುಕೊಂಡಿದ್ದಾರೆ. ಎಷ್ಟೋ ಭಕ್ತರ ಕಷ್ಟ ಮಾರ್ಗದರ್ಶನದಿಂದ ಪರಿಹಾರವಾಗುತ್ತದೆ. ಇಂಥ ಮಾರ್ಗದಿಂದ ಕೆಲವೊಮ್ಮೆ ಪರಿಹಾರವಾಗದಿದ್ದಾಗ ಅವರ ಪಾಪ, ದುಃಖವನ್ನು ತಾವು ಸ್ವೀಕರಿಸಿ ಅನುಭವಿಸುವ ಸಂದರ್ಭ ಮಹಾಪುರುಷರಿಗೆ ಬರುತ್ತದೆ ಎಂದು ವಿಶ್ಲೇಷಿಸಿದರು.

    ಉತ್ತಮ ರಾಜ ಕೂಡಾ ತನ್ನ ಸುಖವನ್ನು ಪ್ರಜೆಗಳ ಜತೆ ಹಂಚಿಕೊಳ್ಳಬೇಕು. ಪ್ರಜೆಗಳ ಕಷ್ಟಗಳಿಗೆ ಸ್ಪಂದಿಸಬೇಕು. ಬದಲಾಗಿ ಜನರ ಸುಖದಲ್ಲಿ ಪಾಲು ಪಡೆಯುವಂತಿರಬಾರದು ಎನ್ನುವುದು ಭಾರತದ ಚಕ್ರವರ್ತಿಗಳ ಪರಿಕಲ್ಪನೆ ಎಂದು ಉದಾಹರಣೆ ಸಹಿತ ವಿವರಿಸಿದರು.

    300x250 AD

    ಶಿವ ಕಷ್ಟವನ್ನು ತಾನೇ ಆವಾಹಿಸಿಕೊಂಡ ಮತ್ತೊಂದು ಅದ್ಭುತ ನಿದರ್ಶನ ನಮ್ಮ ಪುರಾಣದಲ್ಲಿದೆ. ಸಮದ್ರ ಮಥನದ ವೇಳೆ ಹೊರಬಂದ ಹಾಲಾಹಲವನ್ನು ಜೀವ ಜಂತುಗಳ ರಕ್ಷಣೆಗಾಗಿ ತಾನೇ ಪಾನ ಮಾಡುತ್ತಾನೆ. ಆದರೆ ವಿಷ ಕುಡಿದ ಶಿವ ಅಮೃತದಲ್ಲಿ ಎಂದೂ ಪಾಲು ಕೇಳಲಿಲ್ಲ. ಇಂಥ ಆದರ್ಶ ನಮ್ಮನ್ನು ಆಳುವವರದ್ದಾಗಬೇಕು ಎಂದು ಆಶಿಸಿದರು.

    ದುರ್ಗಂಧಯುಕ್ತ ಗೊಬ್ಬರ ಸೇವಿಸುವ ಮರ ಗಿಡಗಳು ನಮಗೆ ರುಚಿಯುಕ್ತ ಪರಿಮಳದ ಹಣ್ಣನ್ನು ನೀಡುತ್ತದೆ. ಆದರೆ ನರ, ಮರದಂತಿಲ್ಲ. ವೈಜ್ಞಾನಿಕವಾಗಿ ನೋಡಿದರೂ, ಇಂಗಾಲದ ಡೈಆಕ್ಸೈಡ್ ಸೇವಿಸಿ ಅಮೃತಮಯವಾದ ಶುದ್ಧ ಆಮ್ಲಜನಕವನ್ನು ನೀಡುತ್ತವೆ. ಆದರೆ ಮನುಷ್ಯ ಶುದ್ಧ ಗಾಳಿ ಸೇವಿಸಿ, ವಿಷಯುಕ್ತ ಗಾಳಿಯನ್ನು ಹೊರ ಸೂಸುತ್ತಾನೆ ಎಂದು ಮಾರ್ಮಿಕವಾಗಿ ನುಡಿದರು. ಕಾರವಾರ ಶಾಸಕಿ ರೂಪಾಲಿ ನಾಯ್ಕ ಅವರು ಸೋಮವಾರ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

    Share This
    300x250 AD
    300x250 AD
    300x250 AD
    Leaderboard Ad
    Back to top