ಭಟ್ಕಳ: ತಾಲೂಕಿನ ರೈಲ್ವೆ ನಿಲ್ದಾಣ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಘಟಕಗಳಿಗೆ ನೀರು ಸರಬರಾಜು ಮಾಡುವ ಬಾವಿ ಪಕ್ಕದಲ್ಲಿಯೇ ಕಸದ ರಾಶಿ ರಾಶಿ ತುಂಬಿಕೊಂಡು ತ್ಯಾಜ್ಯದ ಗುಂಡಿ ನಿರ್ಮಾಣವಾಗಿದ್ದು, ಅಲ್ಲಿಂದ ಮಲೀನವಾದ ನೀರು ಕುಡಿಯುವ ನೀರಿನ ಬಾವಿಯನ್ನು ಸೇರಿಕೊಳ್ಳುವ ಆತಂಕ ಎದುರಾಗಿದೆ.
ಕುಡಿಯುವ ನೀರಿನ ಘಟಕಕ್ಕೆ ಸರಬರಾಜು ಮಾಡುವ ಬಾವಿಯ ಸಮೀಪದಲ್ಲಿಯೇ ತ್ಯಾಜ್ಯಗಳನ್ನು ಎಸೆದು ರಾಶಿ ರಾಶಿಯಾಗಿದ್ದು, ಇದರಿಂದ ಇಲ್ಲಿ ಜನರು ಕಾಲಿಡಲು ಕೂಡ ಹೇಸಿಗೆ ಪಡುವಂತಾಗಿದೆ. ತ್ಯಾಜ್ಯ ಪದಾರ್ಥಗಳು ಕೊಳೆತ ಸ್ಥಿತಿಯಲ್ಲಿ ಬಿದ್ದಿದ್ದು, ಹುಳುಗಳು ಸೃಷ್ಟಿಯಾಗಿವೆ. ಇದರ ಪರಿಣಾಮವಾಗಿ ಸುತ್ತಮುತ್ತಲಿನ ಜನರಿಗೆ ನೀರು ಮಲೀನವಾಗುವ ಭೀತಿ ಮತ್ತು ಮಲೀನವಾದ ಕುಡಿಯುವ ನೀರು ಸರಬರಾಜಾದಲ್ಲಿ ಜನರ ಪರಿಸ್ಥಿತಿ ಏನಾಗಲಿದೆ ಎಂಬ ಆತಂಕ ಎದುರಾಗಿದೆ.
ಮುಖ್ಯವಾಗಿ ಈ ಬಾವಿಯ ನೀರು ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಡಿಯುವ ನೀರು ಪೂರೈಸುವ ಟ್ಯಾಂಕ್‌ಗೆ ಸರಬರಾಜಾಗುತ್ತಿದ್ದು, ಪ್ರಯಾಣಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ನಿಲ್ದಾಣದಲ್ಲಿನ ಕ್ಯಾಂಟೀನ್ ಬಳಕೆಗೆ ಹಾಗೂ ಸಿಬ್ಬಂದಿ ಕುಡಿಯಲು ಇದೇ ಟ್ಯಾಂಕ್‌ನ ನೀರನ್ನು ಬಳಸುತ್ತಿದ್ದಾರೆ. ಒಮ್ಮೊಮ್ಮೆ ಜಾನುವಾರು, ಬೀದಿನಾಯಿ ಅಲ್ಲಿಯೇ ಸತ್ತು ಬೀಳಲಿದ್ದು, ಕೊಳೆತು ಹೋದರೂ 2 ದಿನಗಳ ನಂತರವೇ ವಿಲೇವಾರಿ ಮಾಡಲಾಗುತ್ತದೆ. ಈಗಂತು ಭಾರಿ ಮಳೆಯ ಹಿನ್ನೆಲೆ ತ್ಯಾಜ್ಯದ ನೀರು ಬಾವಿಗೆ ಸೇರಲಿದ್ದು, ನೀರು ತ್ಯಾಜ್ಯಗಳ ಗುಂಡಿಯಲ್ಲಿ ತುಂಬಿಕೊಂಡು ಅಲ್ಲಿಯೇ ಇಂಗಿ ಪಕ್ಕದ ಬಾವಿಯನ್ನು ಸೇರಿಕೊಳ್ಳುತ್ತಿವೆ. ಇದೇ ಬಾವಿಯ ನೀರನ್ನು ರೇಲ್ವೆ ನಿಲ್ದಾಣದ ಎಲ್ಲ ಕುಡಿಯುವ ನೀರು ಸರಬರಾಜು ಘಟಕಗಳಿಗೆ ಒದಗಿಸಲಾಗುತ್ತಿದ್ದು, ಬಹಳಷ್ಟು ಪ್ರಯಾಣಿಕರು ಈ ನೀರನ್ನೇ ಬಾಟಲಿಗೆ ತುಂಬಿಸಿಕೊಂಡು ಹೋಗುತ್ತಾರೆ. ಮಲೀನ ನೀರು ಸೇವಿಸುವ ಜನರ ಆರೋಗ್ಯದ ಗತಿ ಏನು ಎಂಬುದರ ಬಗ್ಗೆ ಜನರು ಅಸಮಾಧಾನ ಹೊರಹಾಕುತ್ತಿದ್ದಾರೆ.
ಬಾವಿಯ ಸುತ್ತ ವರ್ಷಗಳಿಂದ ಕಸದ ರಾಶಿ: ಈ ಬಾವಿಯ ಸುತ್ತಲೂ ವರ್ಷಗಳಿಗೂ ಮೀರಿದ ಯಥೇಚ್ಛವಾದ ಕಸ ಸಂಗ್ರಹವಾಗಿದೆ. ಈ ಬಗ್ಗೆ ರೈಲ್ವೆ ಇಲಾಖೆಯ ಅಧಿಕಾರಿಗಳು ಬಾವಿಯ ಸುತ್ತಲಿನ ಕಸವನ್ನು ವಿಲೇವಾರಿ ಮಾಡುವ ಯತ್ನಕ್ಕೂ ಹೋಗಿಲ್ಲದಿರುವುದು ಮಾತ್ರ ವಿಪರ್ಯಾಸವೆ ಸರಿ.