• Slide
    Slide
    Slide
    previous arrow
    next arrow
  • ಭಕ್ತಿಪಾರಮ್ಯತೆಗೆ ಒತ್ತು ನೀಡಿದ ‘ಸಂಕಷ್ಟಿ ವೃತ ಮಹಾತ್ಮೆ’ ತಾಳಮದ್ದಲೆ

    300x250 AD

    ಶಿರಸಿ: ವಿವೇಕಾನಂದ ನಗರದ ವರಸಿದ್ದಿವಿನಾಯಕನ ಸನ್ನಿಧಿಯಲ್ಲಿ ನಡೆದ ತಾಳಮದ್ದಲೆ ‘ಸಂಕಷ್ಟಿ ಮಹಾತ್ಮೆ’ ಪ್ರೇಕ್ಷಕರಿಗೆ ಮುದನೀಡುತ್ತಾ ವೈಜಾರಿಕತೆಯನ್ನು ಬಡಿದೆಬ್ಬಿಸುತ್ತಾ, ಭಕ್ತಿಪಾರಮ್ಯತೆಗೆ ಒತ್ತು ನೀಡಿ ಮನೋಹರವಾಗಿ, ಮನೋರಮವಾಗಿ ಮೂಡಿಬಂತು. ಯಕ್ಷಗಾನ ವಿದ್ವಾಂಸ ಪ್ರೊ| ಡಾ| ಜಿ.ಎ. ಹೆಗಡೆ ಸೋಂದಾ ವಿರಚಿತ ಈ ಕೃತಿ, ತಾಳಮದ್ದಲೆಯ ವಿಚಾರದ ಓಘದಲ್ಲಿ ಹತ್ತು ಹಲವು ಸಂಗತಿಗಳನ್ನು ಅನಾವರಣಗೊಳಿಸಿ ಆರಾಧನೆ ಆಚರಣೆ, ಸಂಪ್ರದಾಯ ಪದ್ದತಿ, ಮೌಲ್ಯ ಸಂಘರ್ಷ, ತಾತ್ವಿಕತೆ ಇತ್ಯಾದಿ ಸ್ಥಾಪಿತ ಮೌಲ್ಯಗಳನ್ನು ಚರ್ಚೆಗೆ ಒಳಪಡಿಸಿ ಭಕ್ತಿ ಪಾರಮ್ಯತೆಯನ್ನು ವೈಚಾರಿಕ ಉತ್ತುಂಗದಲ್ಲಿ ಸಾರಿತು.
    ಹಿಮ್ಮೇಳ ವೈಭವವದಲ್ಲಿ ಹೊನ್ನಾವರದ ಗೋಪಾಲಕೃಷ್ಣ ಭಾಗವತ ಕಡತೋಕಾ, ಪಿ.ಕೆ. ಹೆಗಡೆ ಹರಿಕೇರಿ, ಕುಮಾರ ಮಯೂರ ಹೆಗಡೆ ಹರಿಕೇರಿ ಕಾಣಿಸಿಕೊಂಡು ಸುಶ್ರಾವ್ಯ ವಾತಾವರಣ ಸೃಷ್ಟಿಸಿ ಆಖ್ಯಾನದ ಯಶಸ್ಸಿಗೆ ಮುನ್ನಡಿ ಬರೆದರು.
    ರಾಜಾ ಸುಜಯನಾಗಿ ಡಾ| ಜಿ.ಎ. ಹೆಗಡೆ ಸೋಂದಾ ; ಯೋಗ, ದೈವೇಶ್ಚೆ, ಗಣಪತಿಯ ಆರಾಧನೆಯ ಮಹತ್ವವನ್ನು ಅದರ ತಾತ್ವಿಕ ನೆಲೆಯಲ್ಲಿ ವ್ಯಾಖ್ಯಾನಿಸಿದರು. ಮೃಗ ಭೇಟೆಗೆ ಸಾಗಿ ವನವಿಹಾರ ಮಾಡಿ ಬದುಕಿನ ಅಭ್ಯುದಯಕ್ಕೆ ನಿಸರ್ಗದ ಕೊಡುಗೆ, ಜೀವಕೋಟಿಗಳ ಸೃಷ್ಟಿ ಸಂಬಂಧ, ಜೀವವೈವಿಧ್ಯಗಳು ಮನುಕುಲಕ್ಕೆ ನೀಡುವ ಸಂದೇಶ ಸಹಕಾರಗಳನ್ನು ವಿಶಿಷ್ಟವಾಗಿ ವರ್ಣಿಸಿ ಚರ್ಚಿಸಿದರು. ಯಾಜ್ಞವಲ್ಕ್ಯನಾಗಿ ಡಾ|ಎಸ. ಡಿ.ಹೆಗಡೆ ಹೊನ್ನಾವರ, ಆಳುವವರು ಹೇಗಿರಬೇಕು, ಜೀವನ ನಿರ್ವಹಣೆಯಲ್ಲಿ ವ್ಯಕ್ತಿಗತ ತತ್ವಗಳು ಸಮಷ್ಟಿಯಲ್ಲಿ ಹೇಗೆ ಸಮ್ಮೀಳಿತಗೊಳ್ಳಬೇಕು ನೇರ ನಿಖರ ವಿಚಾರಗಳು ಹೇಗೆ ಪ್ರಸ್ತುತಗೊಳಬೇಕು ಎಂಬುದನ್ನು ಮನೋಜ್ಞವಾಗಿ ತಿಳಿಸುತ್ತಾ ಸಂವಾದಕ್ಕೆ ಮೆರಗು ತಂದರು.
    ಪ್ರೊ|ಕೃಷ್ಣ ಹೆಗಡೆ ಮುರ್ಡೆಶ್ವರ ಭಾಮಿನಿಯಾಗಿ, ಭಕ್ತಿ ಪ್ರಾಧಾನ್ಯತೆಯನ್ನು ಎತ್ತಿ ಹಿಡಿದು ಆಚರಣೆ, ಆರಾಧನೆಯ ಮಹತ್ವ ಸಾರಿದರು. ಡಾ| ಎಸ್.ಡಿ. ಹೆಗಡೆ ಭಾರ್ಗವಿಯ ಪಾತ್ರದಲ್ಲಿ ಆಚರಣೆ, ಆರಾಧನೆ, ಸಂಪ್ರದಾಯ, ಮೂಢನಂಬಿಕೆ ಮುಂತಾದ ವಿಷಯಗಳನ್ನು ಚರ್ಚೆಗೆ ತಂದು ರಂಜಿಸಿದರು.
    ಬಾಲಚಂದ್ರ ಭಟ್ಟ ಕರಸುಳ್ಳಿ ಮಂತ್ರಿ ಮೇಧಾವಿಯಾಗಿ ಡಾ ಜಿ.ಎ.ಹೆಗಡೆ ಸೋಂದಾ ಅವರ ರಾಜಾ ಸುಜಯನೊಂದಿಗೆ ಉತ್ತಮ ಸಂವಾದ ನಡೆಸಿದರು. ಡಾ. ಜಿ.ಎ. ಹೆಗಡೆ ಸೋಂದಾ ಅವರು ಮೌಲ್ಯ ಸಂಘರ್ಷ, ರಾಜನೈತಿಕತೆ, ಅಧಿಕಾರ ಪಾಲನೆ, ಕೃತಘ್ನತೆ, ವಿಶ್ವಾಸದ್ರೋಹ, ನಂಬಿಕೆ ಮತ್ತು ಮಿತ್ರತ್ವದ ಪರಾಕಾಷ್ಟತೆ ಕುರಿತು ಕರಸುಳ್ಳಿಯವರಲ್ಲಿ ಚರ್ಚಿಸಿ ಸಂವಾದ ಸಂಭ್ರಮವಾಗಿಸಿದರು. ಮೌಲ್ಯ ಸಂಘರ್ಷವು ಭಾವನಾತ್ಮಕವಾದಾಗ ವೈಚಾರಿಕ ನೆಲೆ ಏರುವ ಉತ್ತುಂಗವನ್ನು ಸಂಭಾಷಣೆಯಲ್ಲಿ ಅನಾವರಣಗೊಳಿಸಿ ಆಖ್ಯಾನದ ವ್ಯಾಖ್ಯಾನಕ್ಕೆ ಮೆರಗು ತಂದರು.
    ಜ್ಯೋತಿ ಅಶ್ವಥ ಹೆಗಡೆ ವಿಜಯ ವಿಕ್ರಮಿಯಾಗಿ, ಎಸ್.ಎಸ್. ಭಟ್ ವನಪಾಲನಾಗಿ ಕಾರ್ಯಕ್ರಮಕ್ಕೆ ಕಳೆತಂದರು. ವೈಚಾರಿಕ ಸಂಘರ್ಷದ ನಡುವೆ, ತಾತ್ವಿಕತಳಹದಿಯಲ್ಲಿ ಭಕ್ತಿ ಪಾರಮ್ಯತೆಯನ್ನು ಮೆರೆಸಿದ ಪ್ರಸಂಗ ಇದಾಗಿ ರಸಿಕ ಪ್ರೇಕ್ಷಕರಿಗೆ ರಸದೌತಣ ನೀಡಿತು. ಶ್ರಾವಣ ಸಂಭ್ರಮದ ಅಂಗವಾಗಿ ಶಿರಸಿಯ ಯಕ್ಷಶುಭೋದಯದಿಂದ ಈ ಕಾರ್ಯಕ್ರಮ ವರಸಿದ್ದಿವಿನಾಯಕ ದೇವಾಲಯದ ಸಹಕಾರದಿಂದ ನಡೆಯಿತು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top