ಶಿರಸಿ : ಪ್ರತಿಯೊಂದು ಮಗುವನ್ನು ಶ್ರೀಕೃಷ್ಣನ ಹಾಗೆ ಗುಣ ಸಂಪನ್ನ, ಶಕ್ತಿ ಸಂಪನ್ನ, ವ್ಯಕ್ತರನ್ನಾಗಿ ಮಾಡಲು ಪಾಲಕರು ಒತ್ತಡ ಮುಕ್ತರಾಗಿ ಶಾಂತರಾಗಿರಬೇಕು. ಮನೆ ಮನೆಯಲ್ಲಿಯೂ ದೈವಿಕತೆಯನ್ನು ತುಂಬಿ ಮನೆಯನ್ನು ಗೋಕುಲ ಮಾಡಲು ಶ್ರಮಿಸಬೇಕು, ಎಂದು ಬ್ರಹ್ಮಾಕುಮಾರಿ ವೀಣಾಜಿ ಹೇಳಿದರು.
ಅವರು ಗುರುವಾರ ಸಂಜೆ ಇಲ್ಲಿನ ಪಂಡಿತ ಜನರಲ್ ಆಸ್ಪತ್ರೆ ರಸ್ತೆಯಲ್ಲಿರುವ ಈಶ್ವರೀಯ ವಿಶ್ವವಿದ್ಯಾಲಯದ ಸದ್ಭಾವನಾ ಸಭಾಭವನದಲ್ಲಿ ಕೃಷ್ಣ ಜನ್ಮಾಷ್ಟಮಿ ಉತ್ಸವದಲ್ಲಿ ಶ್ರೀಕೃಷ್ಣ, ರಾಧೆ ಹಾಗೂ ದೇಶಭಕ್ತರ ಛದ್ಮವೇಷ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ನಾಲ್ಕು ತಿಂಗಳು, ಒಂಭತ್ತು ತಿಂಗಳು, ಏಳು ತಿಂಗಳು, ಒಂದು ವರ್ಷದ ಪುಟ್ಟ ಮಕ್ಕಳು ಹಾಗೂ ಆರು ವರ್ಷದವರೆಗಿನ ಮಕ್ಕಳನ್ನು ಕೃಷ್ಣ ರೂಪದಲ್ಲಿ ಶೃಂಗರಿಸಿ ಕರೆ ತಂದ ಪಾಲಕರು ಸನಾತನ ಸಂಸ್ಕೃತಿಯ ಗಟ್ಟಿತನ ಹಾಗೂ ಅರಿವನ್ನು ಸಾರಿದರು.
3 ವರ್ಷದ ಒಳಗಿನವರಲ್ಲಿ ಲವೀಶಾ ನಾಯ್ಕ ಪ್ರಥಮ ಸ್ಥಾನ, ಆದ್ಯ ನವಿಲಗೋಣ ಹಾಗೂ ಶಾರ್ವರಿ ವೆಂಕಟೇಶ ದ್ವಿತೀಯ, ಕೃತಿಕಾ ಹೆಗಡೆ ತೃತೀಯ. 3 ವರ್ಷದಿಂದ 6 ವರ್ಷದವರೆಗಿನವರಲ್ಲಿ ನಿದಿಶಾ ಹೆಗಡೆ ಪ್ರಥಮ ಸ್ಥಾನ, ಶ್ರಾವಣಿ ವೆಂಕಟೇಶ ದ್ವಿತೀಯ, ಪ್ರಣಮ್ಯ ಹೆಗಡೆ ತೃತೀಯ, ನೃತ್ಯದಲ್ಲಿ ಶ್ರಾವಣಿ, ಜಾನು, ಜೈ ಸಂತೋಷಿ ಮಾ ಬಾಲವಾಡಿ ಪ್ರಥಮ ಸ್ಥಾನ, ಚೇತನಾ ಸಂಗಡಿಗರು, ಜೈ ಸಂತೋಷಿ ಬಾಲವಾಡಿ ದ್ವಿತೀಯ, ಆರ್ಯ ಸಂಗಡಿಗರು, ವಿಶ್ವ ಭಾರತಿ ಶಾಲೆ ತೃತೀಯ ಸ್ಥಾನ ಪಡೆದರು.
ದೇಶ ಭಕ್ತರ ಛದ್ಮ ವೇಷ ಸ್ಪರ್ಧೆಯಲ್ಲಿ ಮೂರು ವರ್ಷದ ಒಳಗೆ- ಚೆರಿಕಾ ಪ್ರಥಮ, ಮೂರು ವರ್ಷದಿಂದ ಆರು ವರ್ಷದ ಒಳಗೆ ಚಿರಂತ ಶಿಡೇನೂರು ಹಾಗೂ ಆರೂಷಿ ಪ್ರಭು ಪ್ರಥಮ, ನವ್ಯಾ ದ್ವಿತೀಯ, ಸಾನಿಧ್ಯ ಬಡಿಗೇರ ತೃತೀಯ ಸ್ಥಾನ ಪಡೆದರು.
ನಿರ್ಣಾಯಕರಾಗಿ ಯುವ ಯಕ್ಷಗಾನ ಕಲಾವಿದ ನಿರಂಜನ ಕಾನಗೋಡ, ನೃತ್ಯ ಗುರು ನಯನಾ ಪಟಗಾರ, ನಿವೃತ್ತ ಶಿಕ್ಷಕಿ ಚಂದ್ರಕಲಾ ಕೋಡಿಯಾರ ಆಗಮಿಸಿದ್ದರು. ಎಲ್ಲಾ ಚೈತನ್ಯ ಕೃಷ್ಣರಿಗೆ ಆರತಿ ಮಾಡಿ, ದೀಪಬೆಳಗಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ಹೆಚ್ಚುತ್ತಿರುವ ಕಂಸನಂತಹ ಮನಸ್ಥಿತಿಯನ್ನು ನಾಶಗೊಳಿಸಲು ಮನೆ ಮನೆಯಲ್ಲೂ ಕೃಷ್ಣ ಬಾವ ನೆಲೆಗೊಳಿಸುವ ಸಂಕಲ್ಪ ಸಾಮೂಹಿಕವಾಗಿ ಮಾಡಿಸಲಾಯಿತು.