ಶಿರಸಿ: ದೇಶ ಇಂದು ಶಿಕ್ಷಣ, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ ರಕ್ಷಣೆ ಇತ್ಯಾದಿಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದರೂ ಆಗಬೇಕಾದ ಕಾರ್ಯಗಳು ಇನ್ನಷ್ಟಿವೆ. ದೇಶದಲ್ಲಿ ಬಡತನ, ಅನಕ್ಷರತೆ ,ನಿರುದ್ಯೋಗ ಸಾಕಷ್ಟು ಪ್ರಮಾಣದಲ್ಲಿ ಇದೆ ಎಂದು ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ ಟಿ ಎಸ್ ಹಳೆಮನೆ ಹೇಳಿದರು.
ಅವರು ಎಂ ಎಂ ಕಾಲೇಜಿನಲ್ಲಿ 75 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಮಾಡಿ ಮಾತನಾಡುತ್ತಿದ್ದರು.
ನಮ್ಮ ಹಿರಿಯರು ಹೋರಾಟ ಮಾಡಿದ ಫಲವಾಗಿ ನಾವು ಸ್ವಾತಂತ್ರ್ಯ ವನ್ನು ಅನುಭವಿಸುತ್ತಿದ್ದೇವೆ. ನಮ್ಮ ದೇಶದ ಭವ್ಯತೆ,ಧರ್ಮ, ಇತಿಹಾಸದ ಬಗ್ಗೆ ಅಭಿಮಾನ ಹೊಂದಬೇಕು. ದೇಶಾಭಿಮಾನ,ರಾಷ್ಟ್ರೀಯ ವಾದ ಹಾಗೂ ವಿವೇಚನಾ ಶಕ್ತಿಯೊಂದಿಗೆ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಅಕ್ಷರ ಜ್ಞಾನವನ್ನು ಹೊಂದಬೇಕು. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಸ್ಥಳೀಯ ಭಾಷೆ, ಸಂಸ್ಕ್ರತಿಗಳ ಬೆಳವಣಿಗೆಗೆ ಪೂರಕವಾಗಿದ್ದು, ದೇಶದ ಯುವ ಜನತೆ ಇದರ ಲಾಭ ಪಡೆಯಬೇಕು.
ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕೌಶಲ್ಯವನ್ನು ಹೊಂದುವುದು ಇಂದಿನ ಅಗತ್ಯವಾಗಿದೆ. ನಾವು ನೀವೆಲ್ಲ ಸೇರಿ ಈ ದೇಶದ ಸ್ವಾತಂತ್ರ್ಯ, ಸಾರ್ವಭೌಮತ್ವ,ಅಖಂಡತೆಯನ್ನು ಗೌರವಿಸಬೇಕು.ದೇಶವನ್ನು ವಿಚ್ಛಿದ್ರಕಾರಿ ಶಕ್ತಿಗಳಿಂದ ರಕ್ಷಿಸಬೇಕಾಗಿದೆ.ಈ ದಿಶೆಯಲ್ಲಿ ನಾವೆಲ್ಲ ಕೈ ಜೋಡಿಸೋಣ ಎಂದರು. ಈ ಸಂದರ್ಭದಲ್ಲಿ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು ಹಾಜರಿದ್ದರು.