ಹೊನ್ನಾವರ: ತಾಲೂಕಿನ ಕರ್ಕಿ ಗ್ರಾ.ಪಂ. ಸಭಾಭವನದಲ್ಲಿ ಕರ್ಕಿ, ಹಳದಿಪುರ, ನವೀಲಗೋಣ ಗ್ರಾಮ ಪಂಚಾಯತಿ ವ್ಯಾಪ್ತಿಯ 2021-22ನೇ ಸಾಲಿನ ಬಸವ ವಸತಿ ಯೋಜನೆ ಹಾಗೂ ಅಂಬೇಡ್ಕರ್ ವಸತಿ ಯೋಜನೆ ಅಡಿಯಲ್ಲಿ ಮಂಜೂರಾದ 91 ಫಲಾನುಭವಿಗಳಿಗೆ ಶಾಸಕ ದಿನಕರ ಶೆಟ್ಟಿ ಕಾರ್ಯಾದೇಶ ವಿತರಿಸಿದರು.
ನಂತರ ಮಾತನಾಡಿ, ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಬಜೆಟ್ ಅನುದಾನದ ಹೊರತಾಗಿ 3 ಲಕ್ಷ ಮನೆಗಳ ಕಾರ್ಯಾದೇಶ ನೀಡಿ ಹಣ ಬಿಡುಗಡೆ ಮಾಡಿರಲಿಲ್ಲ. ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಆ ಮನೆಗೆ ಹಣ ನೀಡಿತ್ತು. ಇದೀಗ ಮತ್ತೆ ನೂತನ ಮನೆಗಳಿಗೆ ಅನುದಾನ ಬಿಡುಗಡೆ ಮಾಡಿದೆ. ಮನೆ ನಿರ್ಮಾಣದ ಸಮಯದಲ್ಲಿ ಅಧಿಕಾರಿಗಳ ಮಾಹಿತಿ ಕೆಲಸ ಆರಂಭಿಸಿ 5 ಹಂತದ ಜಿ.ಪಿಎಸ್ ಪೋಟೊ ಅಗತ್ಯವಿದ್ದು, ಅದನ್ನು ಪಂಚಾಯತಿ ಸಿಬ್ಬಂದಿಗಳು ಮಾಡುತ್ತಿದ್ದು, ತೊಂದರೆ ಮಾಡಿದರೆ ನನ್ನ ಗಮನಕ್ಕೆ ತನ್ನಿ ಎಂದು ಫಲಾನುಭವಿಗಳಿಗೆ ತಿಳಿಸಿದರು.
ನವೀಲಗೋಣ ಗ್ರಾ.ಪಂ ಅಧ್ಯಕ್ಷ ಸತೀಶ್ ಹೆಬ್ಬಾರ್ ಮಾತನಾಡಿ, ಗ್ರಾ,ಪಂ ವ್ಯಾಪ್ತಿಯಲ್ಲಿ ಬಹಳಷ್ಟು ಜನ ಅತಿಕ್ರಮಣದಾರರಿದ್ದಾರೆ. ಅವರು ವಸತಿ ಯೋಜನೆ ಫಲಾನುಭವಿಗಳಾಗುವಂತೆ ಮಾಡಿ ಎಂದರು. ಕರ್ಕಿ ಗ್ರಾ,ಪಂ ಅಧ್ಯಕ್ಷೆ ಕಲ್ಪನಾ ಪ್ಲೋರಾ ಮಾತನಾಡಿ, ಇನ್ನೂ ಹೆಚ್ಚಿನ ವಸತಿ ನೀಡಬೇಕು. ಕಾರ್ಲ್ಯಾಂಡ್‌ಗೆ ಹೆಚ್ಚಿನ ಅನುದಾನ ನೀಡಬೇಕು ಎಂದರು.
ತಾಲೂಕ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ ಮಾತನಾಡಿ, ಶಾಸಕರು ಹಲವು ಜನಪರ ಕಾರ್ಯ ಮಾಡುತ್ತಿದ್ದು, ಕ್ಷೇತ್ರದೆಲ್ಲಡೆ ರಸ್ತೆ ಸಮಸ್ಯೆಯನ್ನು ತಮ್ಮ ಅಧಿಕಾರವಧಿಯಲ್ಲಿ ಮಾಡಿದ್ದಾರೆ ಈಗ ಮನೆ ಮಂಜೂರು ಮಾಡಿ ಆದೇಶಪ್ರತಿ ವಿತರಣೆ ಮಾಡಿದ್ದು, ಫಲಾನುಭವಿಗಳು ಕೂಡಲೇ ಮನೆ ನಿರ್ಮಾಣ ನಡೆಸಲು ಆರಂಭಿಸಿ. ಸಕಾಲದಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಎನ್.ಆರ್.ಎಲ್.ಎಂ. ಸಂಜೀವಿನಿ ಯೋಜನೆಯಡಿ ತಾಲೂಕಿನ ಸ್ವಸಹಾಯ ಸಂಘದ ಸದಸ್ಯರು ಸಿದ್ದಪಡಿಸಿದ ತ್ರಿವರ್ಣ ಧ್ವಜವನ್ನು ಶಾಸಕರು ಗ್ರಾ.ಪಂ. ಅಧ್ಯಕ್ಷರಿಗೆ ಹಾಗೂ ಅಧಿಕಾರಿಗಳಿಗೆ ಸಾಂಕೇತಿಕವಾಗಿ ವಿತರಿಸಿದರು. ಕರ್ಕಿ ಗ್ರಾ.ಪಂ. ಉಪಾಧ್ಯಕ್ಷೆ, ಗ್ರಾ.ಪಂ. ಉಪಾಧ್ಯಕ್ಷರು, ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು