ಹೊನ್ನಾವರ: ಮತದಾರರ ಗುರುತಿನ ಚೀಟಿ- ಆಧಾರ್ ಕಾರ್ಡ್ ಜೋಡಣೆಯ ತರಬೇತಿ ಶಿಬಿರ ಪಟ್ಟಣದ ಎಸ್.ಡಿ.ಎಂ.ಕಾಲೇಜಿನಲ್ಲಿ ಜರುಗಿತು.
ಉಪವಿಭಾಗಾಧಿಕಾರಿ ಮಮತಾದೇವಿ ಜಿ.ಎಸ್. ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಮತದಾನ ಮೌಲ್ಯಯುತವಾಗಿದೆ. ಪ್ರತಿಯೊರ್ವರು ಮತದಾನದ ಒಂದು ಭಾಗವಾಗಬೇಕು. ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ ಜೋಡಣೆಯು ಯಶ್ವಸಿಯಾಗಲು ಮತಗಟ್ಟೆಯ ಅಧಿಕಾರಿಗಳ ಪಾತ್ರ ಮಹತ್ವವಾಗಿದೆ. ಸಾರ್ವಜನಿಕರು ಮತ್ತು ಚುನಾವಣಾ ಆಯೋಗದ ಕೊಂಡಿಯಂತೆ ಇವರು ಕಾರ್ಯನಿರ್ವಹಿಸಬೇಕಿದೆ. ಚುನಾವಣೆಯು ಸುಧಾರಿತ ಕ್ರಮದಿಂದ ಕೂಡಿದ್ದು, ವಿದ್ಯುನ್ಮಾನ ಮತಯಂತ್ರದ ಜೊತೆ ವಿ.ವಿ ಪ್ಯಾಡ್ ಇದೀಗ ಜಾರಿಯಲ್ಲಿದೆ. ಹೊಸದಾಗಿ ಹೆಸರು ಸೇರ್ಪಡೆ ತಿದ್ದುಪಡಿ ಜೊತೆಗೆ ಪ್ರತಿಯೊರ್ವರದು ಆಧಾರ ಜೊತೆ ಮತದಾರರ ಗುರುತಿನ ಚೀಟಿ ಜೊಡಣೆ ನಿಯಮ ಜಾರಿಯಲ್ಲಿದೆ ಎಂದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಎಲ್.ಜಿ.ಭಟ್ ಮಾತನಾಡಿ, ಗುರುತಿನ ಚೀಟಿ ಜೋಡಣೆಯ ಕುರಿತು ಮಾಹಿತಿ ನೀಡಿ ಕೇವಲ ಒಂದು ಮೊಬೈಲ್ ಮೂಲಕ ಕುಟುಂಬದ ಉಳಿದ ಸದಸ್ಯರ ಆಧಾರ್ ನಂಬರ್ ವೋಟರ್ ಕಾರ್ಡಿಗೆ ಸೇರಿಸಬಹುದು.ಶಿಕ್ಷಿತರಿಂದ ಸಮಾಜಕ್ಕೆ ಜಾಗೃತಿಗೊಳಿಸುವ ಅನಿವಾರ್ಯತೆ ಇದೆ ಎಂದರು.
ಕೇಶವ್ ನಾಯ್ಕ ಪಿಪಿಟಿ ಮೂಲಕ ಆಧಾರ್ ಜೋಡಣೆ ಪ್ರಕ್ರಿಯೆ ಪ್ರಸ್ತುತಪಡಿಸಿದರು. ಎಸ್.ಡಿ.ಎಂ.ಪ್ರಾಂಶುಪಾಲರಾದ ವಿಜಯಲಕ್ಷ್ಮೀ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಹಶೀಲ್ದಾರ್ ನಾಗರಾಜ ನಾಯ್ಕಡ್, ಇಒ ಸುರೇಶ್ ನಾಯ್ಕ, ಉಷಾ ಹಾಸ್ಯಗಾರ, ವಿಶಾಲ್ ಭಟ್ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.