ಯಲ್ಲಾಪುರ: ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ನಿಮಿತ್ತ ಮಹಾನುಭಾವರ ತ್ಯಾಗ ಬಲಿದಾನವನ್ನು ಸ್ಮರಿಸಿ, ದೇಶಪ್ರೇಮ ಜಾಗೃತಿಗೊಳಿಸಲು ಪ್ರತಿಯೊಂದು ಮನೆಯಲ್ಲಿ ತಿರಂಗ ಹಾರಿಸಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿ.ಬಿ.ಹಳ್ಳಾಕಾಯಿ ಹೇಳಿದರು.
ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಹರ್ ಘರ್ ತಿರಂಗಾ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಶುಕ್ರವಾರ ನ್ಯಾಯಾಲಯದ ಆವರಣದಲ್ಲಿ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿವಿಲ್ ನ್ಯಾಯಾಧೀಶರಾದ ಲಕ್ಷ್ಮೀಬಾಯಿ ಬಸನಗೌಡ ಪಾಟೀಲ ಮಾತನಾಡಿ ಭಾರತ ಸರ್ಕಾರದ ಕಾಯ್ದೆ ರಾಷ್ಟ್ರಧ್ವಜ ಸಂಹಿತೆ ಪ್ರಕಾರ ಪ್ರತಿಯೊಂದು ಮನೆಗಳಲ್ಲಿ ಧ್ವಜಾರೋಹಣ ಮಾಡಿ ಮಹಾನುಭಾವರ ತ್ಯಾಗ ಬಲಿದಾನ ಸ್ಮರಿಸಿ ದೇಶಪ್ರೇಮ ಜಾಗೃತಗೊಳಿಸೋಣ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ತಹಶೀಲ್ದಾರ ಶ್ರೀಕೃಷ್ಣ ಕಾಮ್ಕರ್ ಮಾತನಾಡಿ, ಪ್ರತಿಯೊಂದು ಮನೆ ಅಂಗಡಿಗಳಲ್ಲಿ ಆಗಸ್ಟ್ 13ರಿಂದ 15 ರವರೆಗೆ ತ್ರಿವರ್ಣ ಧ್ವಜಾರೋಹಣ ಮಾಡುವುದರ ಮೂಲಕ ದೇಶಪ್ರೇಮವನ್ನು ಹೆಚ್ಚಿಸಿಕೊಳ್ಳೋಣ ಎಂದು ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ, ರಾಷ್ಟ್ರಧ್ವಜದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು. ವಕೀಲರ ಸಂಘದ ಅಧ್ಯಕ್ಷ ಆರ್ ಕೆ ಭಟ್ಟ ಸಾಂಧರ್ಬಿಕ ಮಾತನಾಡಿದರು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಜಗದೀಶ ಕುಮ್ಮಾರ್, ಸಹಾಯಕ ಸರ್ಕಾರಿ ಅಭಿಯೋಜಕರು ಜೀನತ್ ಬಾನು ಶೇಖ ವೇದಿಕೆಯಲ್ಲಿದ್ದರು. ಪ್ಯಾರಾ ಲೀಗಲ್ ವಾಲಂಟಿಯರ್ ಸುಧಾಕರ ನಾಯಕ ಸ್ವಾಗತಿಸಿ ನಿರೂಪಿಸಿದರು. ಪ್ಯಾನಲ್ ವಕೀಲರಾದ ಬೇಬಿ ಅಮೀನಾ ಶೇಕ್ ವಂದಿಸಿದರು.
ಹಿರಿಯ ವಕೀಲರಾದ ವಿ.ಪಿ.ಭಟ್ಟ ಕಣ್ಣಿಮನೆ, ಎನ್.ಆರ್.ಭಟ್ ಕೊಡ್ಲಗದ್ದೆ, ಸಿಡಿಪಿಓ ರಫಿಕಾ ಹಳ್ಳೂರು, ಪಶು ವೈದ್ಯಾಧಿಕಾರಿ ಡಾ.ಸುಬ್ರಾಯ ಭಟ್, ಜಿ.ಪಂ ಇಂ ವಿಭಾಗದ ಅಧಿಕಾರಿ ಅಶೋಕ ಬಂಟ್, ಪ.ಪಂ ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ತಾರೀಕೊಪ್ಪ, ದೈಹಿಕ ಶಿಕ್ಷಕರು ಸಂಘದ ಅಧ್ಯಕ್ಷ ನಾರಾಯಣ ನಾಯಕ ವಿಶ್ವದರ್ಶನ ದೈಹಿಕ ಶಿಕ್ಷಕ ಮಹೇಶ ನಾಯ್ಕ ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ನ್ಯಾಯಾಲಯದ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಧ್ವಜವನ್ನು ಹಿಡಿದು ಪಥಸಂಚಲನ ಮಾಡಿದರು.