ದಾಂಡೇಲಿ: ನಗರಕ್ಕೆ ಇಎಸ್‌ಐಸಿ 500 ಬೆಡ್‌ನ ಸೂಪರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಮತ್ತು ಇಎಸ್‌ಐಸಿ ಉಪ ಪ್ರಾದೇಶಿಕ ಕಚೇರಿಯನ್ನು ಮಂಜೂರು ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ವತಿಯಿಂದ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಕಚೇರಿಯ ಮೂಲಕ ಗುರುವಾರ ಸಲ್ಲಿಸಲಾಗಿದೆ.
ಮುಖ್ಯಮಂತ್ರಿಗಳಿಗೆ ಸಲ್ಲಿಸಲಾದ ಮನವಿಯಲ್ಲಿ, ಸೂಪರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಇಎಸ್‌ಐಸಿ ಉಪ ಪ್ರಾದೇಶಿಕ ಕಚೇರಿಯನ್ನು ನಗರಕ್ಕೆ ಮಂಜೂರು ಮಾಡಬೇಕೆಂದು ಆಗ್ರಹಿಸಿರುವುದರ ಜೊತೆಗೆ ಅಸಂಘಟಿತ ಕಾರ್ಮಿಕರನ್ನು ಇಎಸ್‌ಐಸಿ ಯೋಜನೆಯಡಿ ತರಲು ಹಾಗೂ ಇಎಸ್‌ಐಸಿ ಗೆ ಇರುವ ಕಾರ್ಮಿಕರ ವೇತನದ ಮಿತಿಯನ್ನು ತೆಗೆದುಹಾಕಿ ಇಎಸ್‌ಐಸಿ ಆರೋಗ್ಯ ವಿಮಾ ಸೌಲಭ್ಯ ಬಯಸುವ ಎಲ್ಲಾ ಕಾರ್ಮಿಕರಿಗೆ ಇಎಸ್‌ಐಸಿ ಯೋಜನೆಯಡಿ ತಂದು ಆರೋಗ್ಯ ರಕ್ಷಣೆ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘವು ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷರಾದ ರಾಜೇಸಾಬ ಕೇಸನೂರು, ಪ್ರಮುಖರುಗಳಾದ ರಮೇಶ ಭಂಡಾರಿ, ಶರಣಪ್ಪ ಬಗಲಿ, ಗೌಸ್ ಕಿತ್ತೂರು, ಯಲ್ಲಪ್ಪ, ಬಾಬುಲಾಲ್, ಸುಭಾಷ್, ಜಾಕೀರ್, ಬಾಬಾಸಾಬ, ಮೆಹಬೂಬು ಮುಲ್ಲಾ, ರವಿ, ಮಂಜುನಾಥ, ರವಿ ಅರ್ಮುಗಂ ಹಾಗೂ ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು ಇದ್ದರು.