ಹೊನ್ನಾವರ: ತಾಲೂಕಿನ ಸಾಲ್ಕೋಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರೆಅಂಗಡಿಯಲ್ಲಿರುವ ಗ್ರಾಮ ಚಾವಡಿಯ ಕಟ್ಟಡ ಒಂದು ಭಾಗವು ಕುಸಿಯುವ ಭೀತಿ ಇದೆ. ಕಟ್ಟಡದ ಇಂತಹ ಅವಸ್ಥೆಯಲ್ಲಿ ಮಹಿಳಾ ಗ್ರಾಮ ಲೆಕ್ಕಾಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕಟ್ಟಡದ ಒಂದು ಭಾಗ ಕುಸಿಯುವುದಲ್ಲದೆ, ಚಾವಣಿಯ ಹೆಂಚು ಪೂರ್ತಿ ಬಿದ್ದು ಹೋಗಿ ಮಳೆ ನೀರು ನೇರ ಒಳಗೆ ಬೀಳುತ್ತಿದೆ. ಒಳಗೆ ಇರುವ ಸಾಮಗ್ರಿಗೆ ನೀರು ತಾಗದಂತೆ ಪ್ಲಾಸ್ಟಿಕ್, ಬ್ಯಾನರ್‌ನಿಂದ ಮುಚ್ಚಿಡಲಾಗಿದೆ. ಕಟ್ಟಡಕ್ಕೆ ಬಳಸಿದ ಕಟ್ಟಿಗೆಯ ಕಿಟಕಿ, ಬಾಗಿಲು, ಜಂತಿ, ರೀಪ್, ಪಕಾಸು ಮುರಿದು ಬೀಳುವ ಸ್ಥಿತಿ ಎದುರಾಗಿದೆ. ಕಟ್ಟಡ ಪೂರ್ತಿ ಸೋರುತ್ತಿದ್ದು, ಮಳೆಯ ನೀರು ಒಳಗೆ ಬೀಳುತ್ತಿದೆ. ನೆಲ ಪೂರ್ತಿ ಒದ್ದೆಯಾಗಿದ್ದು, ಕೆಸರು ಕಾಲಿಗೆ ಅಂಟುಕೊಳ್ಳುತ್ತಿವೆ. ಕಟ್ಟಡದ ಬಹುತೇಕ ಭಾಗ ಬಳಕೆ ಮಾಡಿಕೊಳ್ಳುತ್ತಿಲ್ಲ. ಮುಖ್ಯದ್ವಾರದಲ್ಲಿರುವ ಒಂದು ಕೊಠಡಿಯಲ್ಲಿ ಮಾತ್ರ ಗ್ರಾಮ ಲೆಕ್ಕಿಗರು ಬಳಸಿಕೊಳ್ಳುತ್ತಿದ್ದಾರೆ.
ಗ್ರಾಮೀಣ ಪ್ರದೇಶವಾಗಿರುದರಿಂದ ಕಂದಾಯ ಇಲಾಖೆಯ ಹಲವು ಸೌಲಭ್ಯ ಹಾಗೂ ದಾಖಲಾತಿಗಾಗಿ ಪ್ರತಿನಿತ್ಯ ಇದೇ ಕಛೇರಿಗೆ ನೂರಾರು ಸಾರ್ವಜನಿಕರು ಆಗಮಿಸುತ್ತಾರೆ. ಸರಿಸುಮಾರು 40 ವರ್ಷದ ಹಿಂದಿನ ಕಟ್ಟಡವಾಗಿದ್ದು, ಈ ಕಟ್ಟಡಕ್ಕೆ ಇಷ್ಟು ವರ್ಷ ವಿದ್ಯುತ್ ಸಂಪರ್ಕವೇ ಇರಲಿಲ್ಲ. ಇತ್ತೀಚಿನ ದಿನಗಳಲ್ಲಿ ದಾನಿಗಳ ನೆರವಿನಿಂದ ವಿದ್ಯುತ್ ಸಂಪರ್ಕ ಪಡೆಯಲಾಗಿದೆ. ದಾನಿಗಳ ನೆರವು ಸಿಗದೆ ಇದ್ದರೆ ಈಗಲೂ ಕೂಡ ಕತ್ತಲೆಯಲ್ಲೇ ಇರಬೇಕಾಗಿತ್ತು.
ಕಂದಾಯ ಇಲಾಖೆಯ ಒಂದು ಭಾಗವಾಗಿರುವ ಗ್ರಾಮ ಲೆಕ್ಕಿಗರ ಕಚೇರಿ ಗ್ರಾಮೀಣ ಪ್ರದೇಶದ ಜನರಿಗೆ ಪ್ರತಿ ನಿತ್ಯ ಬಳಕೆಗೆ ಬರುವ ಸರಕಾರಿ ಕಚೇರಿ. ಭೂ ದಾಖಲೆಯಿಂದ ಹಿಡಿದು, ಜಾತಿ, ಆದಾಯ ಹೀಗೆ ಯಾವುದೇ ದಾಖಲಾತಿ ಬೇಕಿದ್ದರು ಇಲ್ಲಿ ಬರಲೇ ಬೇಕು. ಎಷ್ಟೋ ವರ್ಷದ ದಾಖಲೆಗಳನ್ನು ಕಾದಿಡಬೇಕು. ಇಂತಹ ಇಲಾಖೆಗೂ ಒಂದು ಸುಸಜ್ಜಿತ ಕಟ್ಟಡ ಕೊಡಲು ಸರಕಾರ ಹಿಂದೇಟು ಹಾಕಿದೆ. ಈ ಕಟ್ಟಡದ ಅವ್ಯವಸ್ಥೆಯ ಬಗ್ಗೆ ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗಿನ ಎಲ್ಲಾ ಅಧಿಕಾರಿಗಳು, ಗ್ರಾ.ಪಂ.ಪ್ರತಿನಿಧಿಯಿAದ ಹಿಡಿದು, ಶಾಸಕರು, ಜಿಲ್ಲಾ ಉಸ್ತುವಾರಿ ಸಚೀವರು, ಹಾಗೂ ಕಂದಾಯ ಸಚೀವರವರೆಗೂ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ತಹಶೀಲ್ದಾರರು, ಜಿ.ಪಂ. ಇಂಜಿನಿಯರ್ ಬಂದು ಸ್ಥಳ ಪರೀಶೀಲನೆ ಮಾಡಿದ್ದು, ಬಿಟ್ಟರೆ ಏನು ಪ್ರಯೋಜನ ಇದುವರೆಗೂ ಆಗಿಲ್ಲ. ಈ ಸಮಸ್ಯೆಯನ್ನು ಸ್ಥಳಿಯ ಶಾಸಕ ದಿನಕರ ಶೆಟ್ಟಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಅನಾಹುತ ಸಂಭವಿಸುವ ಪೂರ್ವದಲ್ಲಿ ಕಟ್ಟಡ ಬೇರೆಡೆ ಸ್ಥಳಾಂತರಿಸಬೇಕಿದೆ.
ಮಳೆಗಾಲದಲ್ಲಿ ಹಾನಿ ಸಂಭವಿಸಿದರೆ ಪರಿಶೀಲನೆ ಮಾಡಿ ಪಂಚನಾಮೆ ಮಾಡುವ ಕಂದಾಯ ಅಧಿಕಾರಿಗಳು, ಕೆಲ ದಿನದಲ್ಲಿ ಅವರ ಕಛೇರಿ ಪಂಚನಾಮೆ ಮಾಡುವ ಸ್ಥಿತಿ ಬಂದರೂ ಅಚ್ಚರಿ ಇಲ್ಲ. ಗ್ರಾಮದಲ್ಲಿ 2 ಗುಂಟೆ ಕಂದಾಯ ಜಾಗ ಇದ್ದು, ಈ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವ ಕಾರ್ಯವಾಗಬೇಕಿದೆ.