ಕಾರವಾರ: ಅಂಕೋಲಾ ತಾಲೂಕಿನ ಬಾಸಗೋಡ ಗ್ರಾಮದಲ್ಲಿ ನಾಳೆ ಬೆಳಿಗ್ಗೆ ಕೃಷಿ ಹಬ್ಬ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯಕ್ರಮದ ಸಂಘಟಕ ನ್ಯಾಯವಾದಿ ನಾಗರಾಜ ನಾಯಕ ತಿಳಿಸಿದ್ದಾರೆ.
ಕರಾವಳಿಯಲ್ಲಿ ಕೃಷಿ ನಶಿಸುತ್ತಿದ್ದು, ಸಾರ್ವಜನಿಕವಾಗಿ ದೊಡ್ಡ ಮಟ್ಟದಲ್ಲಿ ಕೃಷಿಗೆ ತಿಲಾಂಜಲಿ ಹೇಳುತ್ತಿರುವುದನ್ನು ಮನಗೊಂಡು ಜಿಲ್ಲೆಯ ಜನರಿಗೆ ಕೃಷಿಯ ಮಹತ್ವದ ಬಗ್ಗೆ ತಿಳುವಳಿಕೆ ಕೊಡಲು ಅಂಕೋಲಾದ ಬಾಸಗೋಡದಲ್ಲಿ ಕೃಷಿ ಹಬ್ಬವನ್ನ ಕಳೆದ 13 ವರ್ಷದ ಹಿಂದೆ ಪ್ರಾರಂಭಿಸಲಾಯಿತು. ಕರಾವಳಿಯಲ್ಲಿ ಕೃಷಿ ಇಂದು ಲಾಭದಾಯಕವಲ್ಲ. ಕೃಷಿ ತ್ಯಜಿಸಲು ಇದು ಒಂದು ಕಾರಣವಾದರೆ, ನಗರ ವಲಸೆಯೂ ಸಹ ಇನ್ನೊಂದು ಕಾರಣ. ಕೃಷಿ ಉಳಿದರೆ ಮಾತ್ರ ಕರಾವಳಿ ಉಳಿದೀತು, ಇಲ್ಲವೆಂದರೆ ಕರಾವಳಿ ರಿಯಲ್ ಎಸ್ಟೇಟ್ ಕುಳಗಳ ವಸಾಹತು ಆಗಿ ಬಿಡುತ್ತದೆ ಎಂಬ ಕಾಳಜಿಯಿಂದ ಅಂದಿನ ಜಿಲ್ಲಾಧಿಕಾರಿ ಅಮರ ನಾರಾಯಣ ಅವರನ್ನು 2010ರಲ್ಲಿ ಗದ್ದೆಗೆ ಇಳಿಸಿ, ಉಳುಮೆ ಮತ್ತು ನಾಟಿ ಮಾಡಿಸಿ ಕೃಷಿಯನ್ನು ಹಬ್ಬವನ್ನಾಗಿಸಬಹುದು ಎಂದು ಸಮಾಜಕ್ಕೆ ನ್ಯಾಯವಾದಿ ನಾಗರಾಜ ನಾಯಕ ತೋರಿಸಿಕೊಟ್ಟಿದ್ದರು.
ಜಿಲ್ಲಾಧಿಕಾರಿ ಗದ್ದೆಗೆ ಇಳಿದು ಕೃಷಿ ಮಾಡಿದ್ದು ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಆನಂತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಮೋಹನ ಆಳ್ವಾ, ಅನಾನಸ್ ರಾಜ ರವೂಫ ಸಾಬ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ಅನಂತಕುಮಾರ್ ಹೆಗಡೆ, ಮಾದರ ಚೆನ್ನಯ್ಯ ಸ್ವಾಮೀಜಿ, ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ, ಬಾರ್ಕೂರು ಮಠಾಧೀಶ ಸಂತೋಷ ಗುರೂಜಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಲ್ಲಡ್ಕ ಪ್ರಭಾಕರ ಭಟ್ಟ ಮೊದಲಾದವರು ಬಂದು ಭಾಗವಹಿಸಿ ಹೋದರು. ಅಲ್ಲಿಂದ ಸತತವಾಗಿ ನಡೆಯುತ್ತಾ ಈ ಬಾರಿ 13ನೇ ವರ್ಷಕ್ಕೆ ಕಾಲಿಟ್ಟಿದ್ದು, ಶನಿವಾರ ಬೆಳಿಗ್ಗೆ 10 ಗಂಟೆಗೆ ಬಾಸಗೋಡದ ಸರಯೂ ಬನದಲ್ಲಿ ಕೃಷಿ ಉತ್ಸವ ನಡೆಯಲಿದೆ ಎಂದು ನಾಗರಾಜ ನಾಯಕ ತಿಳಿಸಿದ್ದಾರೆ.
ವಿಶೇಷ ಅತಿಥಿ ವಿಶ್ವೇಶ್ವರ ಭಟ್: ಬಾಸಗೋಡಿನಲ್ಲಿ ನಡೆಯುವ ಕೃಷಿ ಹಬ್ಬ ಕಾರ್ಯಕ್ರಮಕ್ಕೆ ಪ್ರತಿ ವರ್ಷ ವಿಶೇಷ ಅತಿಥಿಗಳು ಆಗಮಿಸುತ್ತಿದ್ದು, ಈ ಬಾರಿಯ ಕೃಷಿ ಹಬ್ಬವನ್ನು ವಿಶ್ವವಾಣಿ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಉದ್ಘಾಟಿಸಲಿದ್ದಾರೆ. ಕೃಷಿ ಹಬ್ಬದಲ್ಲಿ ‘ಕೃಷಿ ಭೀಮ’ ಎಂಬ ಪ್ರಶಸ್ತಿ ನೀಡಲಾಗುತ್ತಿದ್ದು, ಈ ಬಾರಿ ಪ್ರಶಸ್ತಿಯನ್ನು ಶ್ರೀಗಂಧ ಬೆಳೆದು ಸಾಧನೆಗೈದ ರಾಯಚೂರಿನ ಕವಿತಾ ಮಿಶ್ರಾ ಅವರಿಗೆ ನೀಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ಮಾಜಿ ಎಂಎಲ್‌ಸಿ ಭಾನುಪ್ರಕಾಶ್ ಮತ್ತು ಉದ್ಯಮಿ ಅರವಿಂದ ನಾಯಕ ಮುಂತಾದವರು ಪಾಲ್ಗೊಳ್ಳಲಿದ್ದಾರೆ.