Slide
Slide
Slide
previous arrow
next arrow

ಪತ್ರಕರ್ತರಿಗೆ ಜೀವಪರದ ನಿಲುವು, ಬದ್ಧತೆ ಅತೀ ಅಗತ್ಯ: ಡಾ.ವಿನಯಾ ಒಕ್ಕುಂದ

300x250 AD

ದಾಂಡೇಲಿಯಲ್ಲಿ ಸಂಭ್ರಮ, ಸಡಗರದಿಂದ ನಡೆದ ಪತ್ರಿಕಾ ದಿನಾಚರಣೆ: ಗೌರವ ಸನ್ಮಾನ

ದಾಂಡೇಲಿ : ಭಾರತೀಯ ಸಮಾಜ ಆಧುನಿಕತೆಗೆ ಹೊರಳಿಕೊಂಡಂತಹ ಸಂಕ್ರಮಣದ ಬಿಂದುವಾಗಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಪತ್ರಕರ್ತರಾದವರು ಜೀವಪರದ ನಿಲುವು ಮತ್ತು ಬದ್ಧತೆಯನ್ನು ಸದಾ ಮೈಗೂಡಿಸಿಕೊಂಡಿರಬೇಕೆಂದು ನಾಡಿನ ಹೆಸರಾಂತ ಲೇಖಕರು ವಾಗ್ಮಿಗಳು ಆಗಿರುವ ದಾಂಡೇಲಿಯ ಸರಕಾರಿ ಪ್ರಥಮ ದರ್ಜೆ ಮಹಾ ವಿದ್ಯಾಲಯದ ಸಹ ಪ್ರಾಧ್ಯಪಕಿ ಡಾ.ವಿನಯಾ ಒಕ್ಕುಂದ ಹೇಳಿದರು.

ಅವರು ನಗರದ ಡಿಲಕ್ಸ್ ಸಭಾಭವನದಲ್ಲಿ ದಾಂಡೇಲಿ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ ಮತ್ತು ಗೌರವ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ರಸ್ತೆಗಳು ಹಾಗೂ ಮುದ್ರಣಾಲಯಗಳು ಮತ್ತು ಸಂಚಾರ ವ್ಯವಸ್ಥೆ ಆರಂಭವಾದ ನಂತರ ಪತ್ರಿಕೆಗಳು ಆರಂಭವಾಯಿತು. ಪತ್ರಿಕೆಗಳು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಆದರೆ ಇಂದು ಕಾಲ ಬದಲಾಗಿದೆ ಪತ್ರಿಕೆ ಪತ್ರಿಕೋದ್ಯಮವಾಗಿ ಬದಲಾದಂತಹ ಬಹಳ ಬಿಕ್ಕಟ್ಟಿನ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಇಂದು ಮಾಧ್ಯಮ ಕ್ಷೇತ್ರ ಪತ್ರಿಕೆಯ ಜತೆ ಜೊತೆಗೆ ದೃಶ್ಯ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮವಾಗಿ ಹೊರಹೊಮ್ಮಿ ಏಕವ್ಯಕ್ತಿ, ಅಭಿವ್ಯಕ್ತಿಯ ಮಾಧ್ಯಮವಾಗಿ ಬದಲಾಗಿದೆ. ಡಿಜಿಟಲ್ ಮಾಧ್ಯಮದಲ್ಲಿ ಬಂದ ಸುದ್ದಿಯ ಖಚಿತೆಗಾಗಿ ಪತ್ರಿಕೆಯನ್ನು ಓದಲೇ ಬೇಕಾಗಿದೆ. ದಾಂಡೇಲಿಯ ಪತ್ರಕರ್ತರು ಈ ನೆಲದ ಸಾಕ್ಷಿ ಪ್ರಜ್ಞೆಯಾಗಿ ಅತ್ಯಂತ ಪ್ರಾಮಾಣಿಕವಾಗಿ ಹಾಗೂ ಬದ್ಧತೆಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಶ್ರಮಜೀವಿಗಳನ್ನು ಗುರುತಿಸದೇ ಇರುವ ಕಾಲಘಟ್ಟದಲ್ಲಿ ನಾವಿದ್ದೇವೆ, ಬೆವರನ್ನು ಹೇಸಿಗೆ ರೂಪದಲ್ಲಿ ನೋಡುವ ಇಂದಿನ ಈ ಸಮಾಜದಲ್ಲಿ ಬೆವರನ್ನು ಅಂದರೆ ಶ್ರಮಜೀವಿಗಳನ್ನು ಗೌರವಿಸುವ ಮೂಲಕ ದಾಂಡೇಲಿಯ ಕಾರ್ಯನಿರತ ಪತ್ರಕರ್ತರ ಸಂಘ ಈ ಭಾಗದ ನಿಜವಾದ ಜೀವನಾಡಿಯಾಗಿ ತನ್ನನ್ನು ತಾನು ಗುರುತಿಸಿಕೊಂಡಿದೆ ಎಂದರು. ದಾಂಡೇಲಿಯ ಪತ್ರಕರ್ತರು ಸಮಾಜಮುಖಿಯಾಗಿ ಹಾಗೂ ಸದೃಢ ಸಮಾಜ ನಿರ್ಮಾಣಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನಗರಸಭೆಯ ಅಧ್ಯಕ್ಷ ಅಷ್ಪಾಕ್ ಶೇಖ್, ಸಮಾಜದಲ್ಲಿ ಪತ್ರಕರ್ತರ ಸ್ಥಾನ ಬಹಳ ಗೌರವಯುತವಾದುದು. ಆ ನಿಟ್ಟಿನಲ್ಲಿ ದಾಂಡೇಲಿ ಪತ್ರಕರ್ತರೂ ಸಹ ಇದ್ದು, ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ನಗರಸಭೆಯ ಪೌರಾಯುಕ್ತರಾದ ವಿವೇಕ ಬನ್ನೆ ಅವರು ಮಾತನಾಡಿ ಪತ್ರಕರ್ತರು ಸಮಾಜದ ಕನ್ನಡಿಯಿದ್ದಂತೆ. ಜನತೆಗೆ ವರದಿ ನೀಡುವ ಮೂಲಕ ಒಂದು ರೀತಿಯ ಜನಾಭಿಪ್ರಾಯ ಮೂಡಿಸಬಹುದು. ದಾಂಡೇಲಿಯ ಪತ್ರಕರ್ತರು ಸಮಾಜಮುಖಿಯಾಗಿ, ಜನಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಅಭಿನಂದನೀಯ ಮತ್ತು ಅನುಕರಣೀಯವಾಗಿದೆ ಎಂದರು.

ಡಿವೈಎಸ್ಪಿ ಶಿವಾನಂದ ಮದರಖಂಡಿ ಅವರು ಮಾತನಾಡಿ, ಟಿವಿ ಹಾಗೂ ವಿವಿಧ ಸಾಮಾಜಿಕ ಮಾಧ್ಯಮಗಳ ಮೂಲಕ ಕ್ಷಣಾರ್ಧದಲ್ಲಿ ವಿಶ್ವದ ಮಾಹಿತಿಯನ್ನು ತಿಳಿದುಕೊಂಡರೂ ಸಹ ಅದನ್ನು ಪತ್ರಿಕೆಯಲ್ಲಿ ಓದಿದಾಗ ಮಾತ್ರ ಖಚಿತತೆ ಸತ್ಯ ತಿಳಿದು ಬರುತ್ತದೆ, ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರು ಪತ್ರಿಕೆ ಓದಿದರೆ ಹೆಚ್ಚು ಜ್ಞಾನವನ್ನು ಸಂಪಾದಿಸಬಹುದು ಎಂದು ಹೇಳಿ ದಾಂಡೇಲಿಯ ಪತ್ರಕರ್ತರ ಸಾಮಾಜಿಕ ಬದ್ಧತೆಯನ್ನು ಶ್ಲಾಘಿಸಿದರು.

300x250 AD

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಬಸವರಾಜ ಪಾಟೀಲ್ ಅವರು ಮಾತನಾಡಿ ಪತ್ರಕರ್ತರ ಬದುಕು ಬವಣೆಗಳನ್ನು ವಿವರಿಸಿ, ಅಭದ್ರತೆಯ ನಡುವೆಯೂ ಸಮಾಜಮುಖಿಯಾಗಿ ಸಮಾಜಕ್ಕೆ ಬೆಳಕನ್ನು ಚೆಲ್ಲುವ ಹಾಗೂ ಸಮಸ್ಯೆಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಪತ್ರಕರ್ತರು ಪ್ರಾಮಾಣಿಕವಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂದರು. ಎಲ್ಲಾ ಜಯಂತಿಗಳನ್ನು ಮಾಡುವ ಸರಕಾರವು ಪತ್ರಿಕಾ ದಿನಾಚರಣೆಯನ್ನು ಕೂಡ ಆಚರಿಸಲು ಮುಂದಾಗಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ್ ಎಸ್.ಜೈನ್  ಅವರು ಮಾತನಾಡಿ, ಪತ್ರಕರ್ತರೆಂದರೆ ಭಯವಲ್ಲ ಭರವಸೆ. ಅದಕ್ಕೆ ಕಾರಣ ದಾಂಡೇಲಿಯ ಜನತೆ ನೀಡಿದ ಸಹಕಾರ ಮತ್ತು ಪ್ರೋತ್ಸಾಹ. ಈ ಭಾಗದ ಜನ ನೀಡುತ್ತಿರುವ ನಿರಂತರ ಪ್ರೋತ್ಸಾಹದಿಂದ ಪತ್ರಕರ್ತರು ಸಮಾಜದ ಅಭಿವೃದ್ಧಿಯವನ್ನೇ ಮುಖ್ಯ ಗುರಿಯಾಗಿಸಿಕೊಂಡು ಅತ್ಯಂತ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ದಾಂಡೇಲಿಯ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಗರ ಸಭೆಯವರು ಜಾಗ ನೀಡಬೇಕು, ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯವರು ದಾಂಡೇಲಿಗೊಂದು ಪತ್ರಿಕಾ ಭವನವನ್ನು ನಿರ್ಮಾಣ ಮಾಡಿಕೊಡಬೇಕೆಂದು ಇದೇ ಸಂದರ್ಭದಲ್ಲಿ ಮನವಿಯನ್ನು ಮಾಡಿದರು.

ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಶೈಲೇಶ ಪರಮಾನಂದ, ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ  ಎಂ.ಎಸ್.ಕಳ್ಳಿಮಠ, ಕರ್ನಾಟಕ ಕ್ರಿಕೆಟ್ ಮಂಡಳಿಯ ಸದಸ್ಯ ಅನಿಲ್ ಪಾಟ್ನೇಕರ, ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ, ಕಸಾಪ ಅಧ್ಯಕ್ಷ ಬಿ.ಎನ್.ವಾಸರೆ ಅವರು ಶುಭಕೋರಿದರು.

ಕಾರ್ಯಕ್ರಮದಲ್ಲಿ ಶ್ರಮಜೀವಿಗಳಾದ ಬೈಲುಪಾರ್ ನಿವಾಸಿ ಸಾರಾ ಕ್ರೀಸ್ಟನಮ್ಮ ಹಾಗೂ ವಿಶೇಷ ಚೇತನರಾಗಿದ್ದರೂ, ಪ್ರವಾಸಿ ಪ್ರತಿನಿಧಿಯಾಗಿ ಯಶಸ್ವಿ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಂಡಿರುವ  ಗಾಂಧಿನಗರದ ನಿವಾಸಿ ಅಜಯ ಕುಮಾರ್ ಓಬಳೇಶ ಹರಿಜನ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯ್ತು.

ಶಿಕ್ಷಕಿ ಪದ್ಮಶ್ರೀ ಎಸ್.ಜೈನ್ ಪ್ರಾರ್ಥನೆ ಗೀತೆ ಹಾಡಿದರು. ಬಿ.ಎನ್. ವಾಸರೆ  ಸ್ವಾಗತಿಸಿ ಪ್ರಾಸ್ತಾವಿಕ  ಮಾತನಾಡಿದರು.  ಪತ್ರಕರ್ತರ ಸಂಘದ ಖಜಾಂಚಿ ಅಕ್ಷಯಗಿರಿ ಗೋಸಾವಿ ಹಾಗೂ ಸದಸ್ಯ  ರಾಜೇಶ ತಳೇಕರ ಅವರು ಸನ್ಮಾನಿತರನ್ನು ಪರಿಚಯಿಸಿದರು. ಪತ್ರಕರ್ತರ ಸಂಘದ ಕಾರ್ಯದರ್ಶಿ ಗುರುಶಾಂತ ಜಡೆಹಿರೇಮಠ ವಂದಿಸಿದರು. ಸಂಘದ ಸದಸ್ಯ ಪ್ರವೀಣ ಸುಲಾಖೆ ನಿರೂಪಿಸಿದರು. ಹಿರಿಯ ಪತ್ರಕರ್ತ ಕೃಷ್ಣಾ ಪಾಟೀಲ ಹಾಗೂ ಅಪ್ತಾಬ್ ಶೇಖ್ ಸಹಕರಿಸಿದರು. 

Share This
300x250 AD
300x250 AD
300x250 AD
Back to top