• Slide
  Slide
  Slide
  previous arrow
  next arrow
 • ಸುಹಾಸ್ ಮಾಳ್ಕೋಡಗೆ ‘ಅಸಾಧಾರಣ ಪ್ರತಿಭಾ ಪ್ರಶಸ್ತಿ’

  300x250 AD

  ಸಿದ್ದಾಪುರ: ತಾಲೂಕಿನ ಕೋಲಶಿರ್ಸಿಯ ಸುಹಾಸ್ ನಾಗರಾಜ ನಾಯ್ಕ ಮಾಳ್ಕೋಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡುವ 2020-21ನೇ ಸಾಲಿನ ಅಸಾಧಾರಣ ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾನೆ. ಆ.15ರಂದು ನಡೆಯುವ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ನಗದು ಪುರಸ್ಕಾರದೊಂದಿಗೆ ಪ್ರಶಸ್ತಿ ಪತ್ರವನ್ನು ನೀಡಿ ಸನ್ಮಾನಿಸಲಾಗುತ್ತಿದೆ.
  ಪಟ್ಟಣದ ಪ್ರಶಾಂತಿ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿಯಾಗಿರುವ ಸುಹಾಸ್, ಸೃಜನಾತ್ಮಕ ಕಲೆಗಳಾದ ಚಿತ್ರಕಲೆ, ಜೇಡಿಮಣ್ಣಿನ ಕಲೆ, ಕರಕುಶಲ ಕಲಾಕೃತಿಗಳ ರಚನೆಯಲ್ಲಿ ಬಾಲ್ಯದಲ್ಲಿಯೇ ಆಸಕ್ತಿಯನ್ನು ಬೆಳೆಸಿಕೊಂಡಿದ್ದಾನೆ. ರಾಜ್ಯ ಮಟ್ಟದ ಕಲಾಭೂಷಣ ಪುರಸ್ಕಾರ, ಕಲಾಶ್ರೀ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾನೆ. 2ನೇ ತರಗತಿಯಲ್ಲಿ ಇರುವಾಗ ಶಿಕ್ಷಣ ಇಲಾಖೆ ನಡೆಸುವ ಪ್ರತಿಭಾ ಕಾರಂಜಿ ಸ್ಪರ್ಧೆಯ ಚಿತ್ರಕಲೆಯಲ್ಲಿ ಆಯ್ಕೆಯಾಗುವ ಮೂಲಕ ತನ್ನಲ್ಲಿಯ ಕಲಾಶಕ್ತಿಯನ್ನು ಹೆಚ್ಚಿಸಿಕೊಂಡಿದ್ದಾನೆ. ನಂತರದಲ್ಲಿ ನಿರಂತರವಾಗಿ ಈವರೆಗೂ ತಾಲೂಕು ಹಾಗೂ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾನೆ. ನಂತರದಲ್ಲಿ ಭಾಗವಹಿಸಿದ್ದ ಎಲ್ಲಾ ಚಿತ್ರಕಲಾ ಸ್ಪರ್ಧೆಗಳಲ್ಲಿಯೂ ಬಹುಮಾನಗಳನ್ನು ಪಡೆದುಕೊಂಡಿರುವುದು ಇವನ ಸಾಧನೆಗೆ ಹಿಡಿದ ಕನ್ನಡಿಯಾಗಿದೆ.
  ಕಳೆದ ಎರಡು ವರ್ಷಗಳ ಹಿಂದೆ ಜಿಲ್ಲಾ ಮಟ್ಟದಲ್ಲಿ ನಡೆದ ‘ಕಲಾಶ್ರೀ’ ಆಯ್ಕೆ ಶಿಬಿರದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಿ ರಾಜ್ಯಮಟ್ಟದ ಕಲಾಶ್ರೀ ಸ್ಪರ್ಧೆಗೆ ಆಯ್ಕೆಯಾಗಿರುವುದು ಬಹುದೊಡ್ಡ ಸಾಧನೆಯಾಗಿದೆ. ಈ ಹಿಂದೆ ಶಾಂತಿ ಮತ್ತು ಮಾನವೀಯತೆ ರಾಷ್ಟ್ರೀಯ ಅಭಿಯಾನ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಆಯ್ಕೆಯಾಗಿದ್ದ.ಅಂತರಾಷ್ಟ್ರೀಯ ಚಿಂತನ ಚಿತ್ರಕಲಾ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮೊದಲನೇ ರ‍್ಯಾಂಕ್ ಪಡೆದಿರುವುದು ಅಭಿಮಾನದ ಸಂಗತಿ. ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಪೆಢರೇಶನ ನವದೆಹಲಿ ನಡೆಸಿದ ಬೆಳಗಾಂವ ವಿಭಾಗ ಮಟ್ಟದ ಸ್ಪರ್ಧೆಯಲ್ಲಿಯೂ ಆಯ್ಕೆಯಾಗಿದ್ದಾನೆ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಏರ್ಪಡಿಸಿದ್ದ ರಾಜ್ಯಮಟ್ಟದ ಸ್ಪರ್ಧೆಯಲ್ಲಿಯೂ ಭಾಗವಹಿಸಿ ಫಲಿತಾಂಶದ ನಿರೀಕ್ಷೆಯಲ್ಲಿದ್ದಾನೆ.
  ಸುಹಾಸ್ ತನ್ನ ವಯಸ್ಸಿಗೆ ಮೀರಿದ ಪ್ರತಿಭೆಯನ್ನು ಹೊಂದಿದ್ದು, ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದಾನೆ. ತಾಲೂಕಿನ ಸುತ್ತಮುತ್ತ ಯಾವುದೇ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದರೂ ಬಹುಮಾನ ಕಟ್ಟಿಟ್ಟ ಬುತ್ತಿ ಎನ್ನುವಷ್ಟರಮಟ್ಟಿಗೆ ಭರವಸೆಯನ್ನು ಮೂಡಿಸಿದ್ದಾನೆ. ಚಿತ್ರಕಲೆಯಲ್ಲಿ ವಿಶೇಷವಾದ ಆಸಕ್ತಿಯನ್ನು ಹೊಂದಿರುವ ಈತ ರಾಷ್ಟ್ರ ನಾಯಕರುಗಳ ಹಾಗೂ ಸ್ನೇಹಿತರು, ಬಂಧುಗಳ ಜನ್ಮದಿನದಂದು ಅವರ ಚಿತ್ರವನ್ನು ಬರೆದು ಶುಭಹಾರೈಸುವ ಪರಿಪಾಠ ಬೆಳೆಸಿಕೊಂಡಿದ್ದಾನೆ.


  ಕಲಾಭೂಷಣ ಪುರಸ್ಕಾರ: ರಾಣಿಬೆನ್ನೂರಿನ ಕಾಗದ ಸಾಂಗತ್ಯ ವೇದಿಕೆ ಆಯೋಜಿಸಿದ ರಾಜ್ಯಮಟ್ಟದ ಮಕ್ಕಳ ಚಿತ್ರಕಲಾ ಸ್ಪರ್ಧೆ-2020ರಲ್ಲಿ ಭಾಗವಹಿಸಿದ್ದ 1868 ಮಕ್ಕಳಲ್ಲಿ ವಿಭಿನ್ನತೆಯಿಂದ ಕೂಡಿದ ಚಿತ್ರವನ್ನು ರಚಿಸಿದ ಕಾರಣಕ್ಕೆ ‘ಕಲಾಭೂಷಣ ಪುರಸ್ಕಾರಕ್ಕೆ’ ಸುಹಾಸ್ ನಾಯ್ಕನನ್ನು ಆಯ್ಕೆ ಮಾಡಲಾಗಿದೆ. ತನ್ನ 9ನೇ ವಯಸ್ಸಿನಲ್ಲಿಯೇ ಚಿತ್ರಕಲಾ ಪ್ರದರ್ಶನದಲ್ಲಿ ಕಲಾಕೃತಿಗಳ ಪ್ರದರ್ಶನ ಮಾಡಿದ್ದಾನೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top