ಭಟ್ಕಳ: ಇತ್ತೀಚಿಗೆ ಸುರಿದ ಭಾರಿ ಮಳೆಗೆ ಪುರಸಭಾ ವ್ಯಾಪ್ತಿಯಲ್ಲಿ ಹಾಗೂ ಜಾಲಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟೂ 4483 ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಹಾನಿ ಸರ್ವೆ ಕೆಲಸವನ್ನು ಶೀಘ್ರವಾಗಿ ಪೂರ್ಣಗೊಳಿಸಿ ಸಂತ್ರಸ್ತರಿಗೆ ಪರಿಹಾರ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಇಲ್ಲಿನ ತಾಲೂಕಾ ಆಡಳಿತ ಸೌಧದಲ್ಲಿ ನೆರೆಹಾವಳಿ ಪ್ರಗತಿ ಪರಿಶೀಲನೆ ಮತ್ತು ಪರಿಹಾರ ವಿತರಣೆಯ ಕುರಿತು ಸಭೆ ನಡೆಸಿ ಮಾತನಾಡಿ, ಹಿಂದೆಂದೂ ಕಂಡಿರದ ರೀತಿಯಲ್ಲಿ ಭಟ್ಕಳ ವ್ಯಾಪ್ತಿಯಲ್ಲಿ ಮಳೆ ಸುರಿದಿದ್ದು, ದಾಖಲೆಯ ಜೊತೆಗೆ ಜನರು ಅವರ ಅವಶ್ಯಕತೆಯನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಇಂತಹ ಸಮಯದಲ್ಲಿ ಅಧಿಕಾರಿಗಳು ಹಾನಿಯಾದ ಪ್ರದೇಶಕ್ಕೆ ತೆರಳಿ ಶೀಘ್ರವಾಗಿ ಹಾನಿ ಸರ್ವೇ ಕಾರ್ಯ ಮುಗಿಸಬೇಕು ಹಾಗೂ ಅವರಿಗೆ ಪರಿಹಾರದ ಹಣ ಬೇಗ ಸಿಗುವಂತಾಗಬೇಕು. ಈಗಾಗಲೇ ಸಾಕಷ್ಟು ಮನೆಗಳಲ್ಲಿ ನುಗ್ಗಿದ ನೀರು ಇನ್ನು ತನಕ ಇಳಿದಿಲ್ಲ. ಕೆಲವೊಂದು ಮನೆಗಳ ಸ್ವಚ್ಛತೆಗೆ 15 ದಿನ ಬೇಕಾಗುತ್ತದೆ. ಅಲ್ಲಿಯ ತನಕ ಅವರ ಬದುಕು ಕಷ್ಟಕರವಾಗಬಾರದು. ಹಾನಿ ಸರ್ವೇ ಕಾರ್ಯ ವಿಳಂಬ ಮಾಡದೇ ಚುರುಕಾಗಿ ಕೆಲಸ ಮಾಡಬೇಕು. ಈಗಾಗಲೇ ನೆರೆ ಪ್ರವಾಹ ಉಂಟಾಗಿ ಪರಿಹಾರಕ್ಕೆ ನಿಧಾನ ಮಾಡಿದರೆ ಜನರಿಗೆ ಸಮಸ್ಯೆ ಆಗಲಿದೆ ಎಂದರು.
ಮನೆಗಳು ಹಾನಿಯ ಜೊತೆಗೆ ದೇವಸ್ಥಾನಗಳಿಗೆ ಹಾಗೂ ಅಂಗಡಿಗಳಿಗೆ ನೀರು ನುಗ್ಗಿ ಹಾನಿಯಾಗಿರುವುದಕ್ಕೆ ಪ್ರತ್ಯೇಕವಾಗಿ ಅಂದಾಜು ಪಟ್ಟಿ ತಯಾರಿಸಿ ಸರಕಾರಕ್ಕೆ ಕಳುಹಿಸಬೇಕು. ವಿಶೇಷ ಪ್ರಕರಣ ಎಂದು ಪರಿಹಾರ ಮಂಜೂರಿ ಮಾಡಲು ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದರು. ತಹಶೀಲ್ದಾರ ಡಾ.ಸುಮಂತ ಬಿಇ ಹಾನಿ ವಿವರ ನೀಡಿ, ಅಧಿಕಾರಿಗಳಿಂದ ನೆರೆ ಹಾನಿ ಮಾಹಿತಿ ಪಡೆದ ಸಚಿವರು, ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ 21 ಮನೆಗಳು ಪೂರ್ಣ ಹಾನಿ ಹಾಗೂ 32 ಮನೆಗಳಿಗೆ ತೀವ್ರ ಹಾನಿಯಾಗಿದೆ. 88 ಮನೆಗಳಿಗೆ ಭಾಗಶಃ ಹಾನಿಯ ಜೊತೆಗೆ ಜಾನುವಾರು ಹಾಗೂ 232 ಕೋಳಿಗಳು ಸಾವನ್ನಪ್ಪಿವೆ ಎಂದು ವಿವರಿಸಿದರು. ಗ್ರಾಮಾಂತರ ಭಾಗದ 9 ಪಂಚಾಯತಿ ವ್ಯಾಪ್ತಿಯಲ್ಲಿ 126 ಅಂಗಡಿಗಳಿಗೆ ನೀರು ನುಗ್ಗಿ ಹಾನಿಯಾಗಿದ್ದು, ಒಟ್ಟೂ ರೂ. 95,27,000 ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಅದರಂತೆ 3395 ಮನೆಗಳಿಗೆ ನೀರು ನುಗ್ಗಿದ್ದು, ತಲಾ 10 ಸಾವಿರ ರೂಪಾಯಿಗಳ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. 6 ಮನೆಗಳು ಪೂರ್ಣ ಹಾನಿಯಾಗಿದ್ದು, 26 ಮನೆಗಳು ಭಾಗಶಃ ಹಾನಿಯಾಗಿವೆ ಎಂದು ಮಾಹಿತಿ ನೀಡಿದರು.
ಶಾಸಕ ಸುನೀಲ ನಾಯ್ಕ ಮಾತನಾಡಿ, ಮಳೆ ಹಾನಿಯಲ್ಲಿ ಮನೆ, ಅಂಗಡಿಗಳ ಜೊತೆಗೆ ತಮ್ಮ ಜೀವನೋಪಾಯಕ್ಕಾಗಿ ಕೋಳಿ ಸಾಕಾಣಿಕೆ ಮಾಡಿದವರು ನೂರಾರು ಕೋಳಿಗಳನ್ನು ಕಳೆದುಕೊಂಡಿದ್ದಾರೆ. ಕೋಳಿಗಳಿಗೆ ಈಗಿನ ಮಾನದಂಡದAತೆ ಕೇವಲ 50 ರೂ. ಕೊಡಲಾಗುತ್ತಿದ್ದು, ಕನಿಷ್ಟ 500 ರೂ. ಮಾಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು. 26 ಹೆಕ್ಟೇರ್ ತೋಟಗಾರಿಕಾ ಪ್ರದೇಶಕ್ಕೆ ಹಾನಿಯಾಗಿದ್ದು, ಪ್ರತಿ ಹೆಕ್ಟೇರ್‌ಗೆ ನೀಡುವ ಪರಿಹಾರ ಅತ್ಯಂತ ಕಡಿಮೆಯಾಗಿದೆ. ಗುಂಟೆ ಲೆಕ್ಕದಲ್ಲಿ ಪರಿಹಾರ ಲೆಕ್ಕಾಚಾರ ಮಾಡಿದ್ದಲ್ಲಿ ಕಷ್ಟಪಟ್ಟು ದುಡಿದ ಕೃಷಿಕನ ಶ್ರಮಕ್ಕೆ ಬೆಲೆ ಇರುವುದಿಲ್ಲ. ಇದನ್ನು ಸರಕಾರದ ಮಟ್ಟದಲ್ಲಿ ಮರುಪರಿಶೀಲನೆಗೆ ಒತ್ತಾಯಿಸಬೇಕು ಎಂದು ಸಚಿವರ ಗಮನಕ್ಕೆ ತಂದರು.
ಕೆಲವೊಂದು ಗ್ರಾಮ ಪಂಚಾಯತಿಗಳಲ್ಲಿ ಸಾರ್ವಜನಿಕರು ಅರ್ಜಿ ಸಲ್ಲಿಸಲು ಬಂದಾಗ ಇಂದಿಗೆ ಅರ್ಜಿ ಸಲ್ಲಿಕೆ ಅವಧಿ ಮುಗಿದಿದೆ. ಇನ್ನುಮುಂದೆ ಅರ್ಜಿ ಪರಿಶೀಲನೆ ಇರುವುದಿಲ್ಲ ಎಂದು ಕೆಲ ಪಿಡಿಓಗಳು ಹೇಳುತ್ತಿರುವ ಬಗ್ಗೆ ದೂರು ಬಂದಿದ್ದು, ಈ ಕುರಿತಾಗಿ ಪರಿಶೀಲಿಸುವಂತೆ ತಾಲೂಕಾ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಮನೆ ಅವರಿಗೆ ಸೂಚಿಸಿದರು. ಇದಕ್ಕೆ ಉಸ್ತುವಾರಿ ಸಚಿವ ಪೂಜಾರಿ, ಮಳೆಯಿಂದ ಒಮ್ಮೆ ನೀರು ನುಗ್ಗಿದರೆ ಮಣ್ಣುಗೋಡೆ ಹಾಗೂ ಕಚ್ಚಾ ಮನೆಗಳು ಯಾವ ಸಮಯದಲ್ಲಿ ಬೀಳುತ್ತವೆ ಎಂದು ಹೇಳಲಾಗದು. ನೀರು ನಿಂತು ಸಾಕಷ್ಟು ದಿನದ ನಂತರವೂ ಬೀಳುವ ಸಾಧ್ಯತೆ ಇದ್ದು, ಈ ಹಿನ್ನೆಲೆ ಪರಿಹಾರದ ಅರ್ಜಿಗಳನ್ನು ತೆಗೆದುಕೊಳ್ಳುವುದನ್ನು ನಿರಂತರವಾಗಿ ಮುಂದುವರಿಸಿ. ಯಾರೇ ಬಂದರೂ ಕೂಡ ಅರ್ಜಿ ಸ್ವೀಕರಿಸುವುದಿಲ್ಲ ಎಂದು ಹೇಳುವಂತಿಲ್ಲ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮಮತಾದೇವಿ ಜಿ.ಎಸ್. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ವೆಂಕಟಾಪುರದಲ್ಲಿ ಅನಾವಶ್ಯಕ ಚರಂಡಿ: ವೆಂಕಟಾಪುರದ ಸಮತಟ್ಟು ಪ್ರದೇಶದಲ್ಲಿ ಹೆದ್ದಾರಿಯ ಪಕ್ಕದಲ್ಲಿ ಅನಾವಶ್ಯಕ ವೆಚ್ಚ ಮಾಡಿ ಚರಂಡಿ ನಿರ್ಮಿಸಿದ್ದೀರಿ. ಅಲ್ಲಿ ಯಾವುದೇ ಮಳೆಯ ನೀರು ನಿಲ್ಲುವುದಿಲ್ಲ. ಅದರ ಬದಲಿಗೆ ಮಣ್ಕುಳಿ ಹಾಗೂ ಮೂಢಭಟ್ಕಳ ವ್ಯಾಪ್ತಿಯಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆ ಮಾಡಿದ್ದಲ್ಲಿ ಅಲ್ಲಿನ ಜನರು ಮಳೆ ಎಷ್ಟೇ ಸುರಿದರೂ ಮನೆಗೆ ನೀರು ಬರುವ ಚಿಂತೆಯಿಲ್ಲದೇ ಇರುತ್ತಿದ್ದರು. ಪ್ರತಿ ಬಾರಿಯು ಸಹ ಮಳೆಯ ನೀರು ಮನೆಗೆ ನುಗ್ಗಲು ಹೆದ್ದಾರಿ ಕಾಮಗಾರಿಯೇ ನೇರ ಕಾರಣ ಎಂದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಕುರಿತು ಶಾಸಕ ಸುನೀಲ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಹೆದ್ದಾರಿ ಕಾಮಗಾರಿಯ ಪ್ರಾಜೆಕ್ಟ್ ಇಂಜಿನಿಯರ್, ಅವಶ್ಯಕ ಪ್ರದೇಶದಲ್ಲೂ ಸಹ ಜನರು ಸಹಕರಿಸಿದರೆ ಚರಂಡಿ ವ್ಯವಸ್ಥೆ ಮಾಡಿಕೊಡುವುದಾಗಿ ಸಭೆಯಲ್ಲಿ ಸಚಿವರಿಗೆ, ಶಾಸಕರಿಗೆ ತಿಳಿಸಿದರು.