ದಾಂಡೇಲಿ: ತ್ಯಾಗ- ಬಲಿದಾನಗಳ ಪ್ರತೀಕವಾದ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ 50 ವರ್ಷಗಳಿಂದ ರಾಷ್ಟ್ರಧ್ವಜ ಹಾರಿಸದವರು, ಬ್ರಿಟೀಷರಿಗೆ ತಪ್ಪೊಪ್ಪಿಗೆ ಬರೆದುಕೊಟ್ಟವರು ಈಗ ‘ಹರ್ ಘರ್ ತಿರಂಗಾ’ ಎಂದು ಹೇಳುತ್ತಿದ್ದಾರೆ ಎಂದು ಮಾರ್ಕ್ಸ್ವಾದಿ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಯಮುನಾ ಗಾಂವಕರ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 1920- 21ರಲ್ಲಿ ಭಾರತಕ್ಕೆ ಸ್ವಾತಂತ್ರ ಸಿಗಬೇಕು ಎನ್ನುವ ಮೊಟ್ಟಮೊದಲ ಘೋಷಣೆ ಮಾಡಿದ್ದು ಕಮ್ಯೂನಿಸ್ಟರೇ ಆಗಿದ್ದಾರೆ. ಸ್ವಾತಂತ್ರಕ್ಕಾಗಿ ಪ್ರಾಣವೊಡ್ಡಿದ ಧೀರರನ್ನು, ಎಲೆಮರೆಯ ಕಾಯಿಯಂತೆ ಹೋರಾಡಿದ ಪ್ರತಿಯೊಬ್ಬರನ್ನು ನೆನೆಸದೆ ಸ್ವಾತಂತ್ರೋತ್ಸವ ಆಚರಣೆ ಅಪೂರ್ಣ ಎಂದರು.
ಸ್ವಾತAತ್ರೋತ್ಸವದ ಅಮೃತ ಮಹೋತ್ಸವ ಆಚರಣೆ ಸಂದರ್ಭದಲ್ಲಿ ದೇಶ ಮತ್ತು ರಾಜ್ಯದಲ್ಲಿ ಚುಕ್ಕಾಣಿ ಹಿಡಿದಿರುವ ಸರಕಾರದ ಜನ ವಿರೋಧಿ ನೀತಿಯನ್ನು ಜನರ ಮುಂದಿಟ್ಟು ಸಿಪಿಐ (ಎಂ) ಪಕ್ಷವು ರಾಷ್ಟ್ರವ್ಯಾಪಿ ಬೇಡಿಕೆ ಈಡೇರಿಕೆಗೆ ಮನವಿ ಸಲ್ಲಿಸಲಿದೆ. ಅದರಂತೆ ಜಿಲ್ಲೆಯಲ್ಲೂ ಸರ್ಕಾರಗಳ ವೈಫಲ್ಯ ಜನರ ಮುಂದಿಟ್ಟು ಬೇಡಿಕೆ ಈಡೇರಿಕೆಗೆ ಮನವಿ ಸಲ್ಲಿಸಲಾಗುತ್ತದೆ. ಸರಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರಕಾರ ಮುಂದಾಗುತ್ತಿರುವುದು ಭವಿಷ್ಯದ ಹಿತದೃಷ್ಟಿಯಿಂದ ಕಳವಳಿಕಾರಿಯಾಗಿದೆ. ಇದೀಗ ವಿದ್ಯುತ್ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಮತ್ತೊಂದು ದುಸ್ಸಾಹಸಕ್ಕೆ ಕೇಂದ್ರ ಸರಕಾರ ಕೈ ಹಾಕಿರುವುದು ಖಂಡನೀಯ ಎಂದರು.
ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಡಿ.ಸ್ಯಾಮಸನ್ ಮಾತನಾಡಿ, ಜಿ+2 ಮನೆಗಳ ಹಂಚಿಕೆ ಸಮಸ್ಯೆ, ಅನುಭೋಗದಾರಿಗೆ ಹಕ್ಕುಪತ್ರ, ಲೀಸ್ ಭೂಮಿಯ ಸಕ್ರಮಾತಿ, ಉದ್ಯೋಗ ಸಮಸ್ಯೆ, ಪಂಚ ವಾರ್ಷಿಕ ಯೋಜನೆಯಲ್ಲಿ ನೀಡಿರುವ ಭೂಮಿಯಲ್ಲಿ ಸ್ಥಗಿತಗೊಂಡಿರುವ ಕಾರ್ಖಾನೆಗಳ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಂಡು ಹೋಸ ಕೈಗಾರಿಕೆ ಸ್ಥಾಪನೆ ಮಾಡಬೇಕು. ಹಿಗೆ ಸ್ಥಳೀಯವಾಗಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ ಸ್ವಾತಂತ್ರೋತ್ಸವ ಆಚರಣೆ ಸಂದರ್ಭದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಿಪಿಐ (ಎಂ) ಪಕ್ಷದ ತಾಲೂಕು ಕಾರ್ಯದರ್ಶಿ ಸಲೀಂ ಸೈಯದ್, ಜನವಾದಿ ಮಹಿಳಾ ಸಂಘದ ಅಧ್ಯಕ್ಷೆ ರತ್ನದೀಪ ಎನ್.ಎಂ., ಪ್ರಮುಖರಾದ ಇಮ್ರಾನ್ ಖಾನ್, ವಿಠಲ ರೇಣಕೆ ಇದ್ದರು.