ಶಿರಸಿ: ಲಯನ್ಸ್ ಕ್ಲಬ್’ನಿಂದ ಒಂದು ಹೊಸ ಪ್ರಯೋಗ. ಭಾರತೀಯ ಸಂಸ್ಕೃತಿ ವನವನ್ನು ಲಯನ್ ಸದಸ್ಯರಾದ ಲ.ಚಂದ್ರಶೇಖರ ಮತ್ತು ಲ.ಗಂಗಾ ಹೆಗಡೆಯವರ ನೀರ್ನಳ್ಳಿಯ ಬೆಟ್ಟದ ಜಾಗದಲ್ಲಿ ನಿರ್ಮಿಸಲಾಯಿತು. ಇದರ ಪ್ರಾರಂಭಿಕ ಹಂತವಾಗಿ ಸರಸ್ವತಿ ವನ ಮತ್ತು ಶಿವ ಪಂಚಾಯತನ ವನವನ್ನು ಯೂಥ್ ಫಾರ್ ಸೇವಾದ ಪರಿಸರ ಸಂಯೋಜಕ ಉಮಾಪತಿ ಭಟ್ಟರ ಮಾರ್ಗದರ್ಶನದಲ್ಲಿ ಮಾಡಲಾಯಿತು. ಸರಸ್ವತಿ ವನದಲ್ಲಿ ಅಶೋಕ, ಚಂಪಕ, ದ್ರೋಣ, ಮಂದಾರ ಮುಂತಾದ ಸಸಿಗಳನ್ನು ಮತ್ತು ಶಿವ ವನದಲ್ಲಿ ಅಶೋಕ, ಅಶ್ವತ್ಥ, ಬಿಲ್ವ ಮುಂತಾದ ಸಸಿಗಳನ್ನು ನೆಡಲಾಯಿತು.
ಲ.ಬಿಂದು ಹೆಗಡೆಯವರ ಪರಿಸರ ಗೀತೆಯಿಂದ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಲಿಯೋ ಮಕ್ಕಳಿಗೆ ನೋಟ್ಬುಕ್ ಮತ್ತು ಪೆನ್ನನ್ನು ಲ.ಚಂದ್ರಶೇಖರ ಹೆಗಡೆಯವರು ವಿತರಿಸಿ ಮಕ್ಕಳು ಅದರಲ್ಲಿ ಬರೆದುಕೊಳ್ಳಲು ಹೇಳಿದರು. ಸುಮಾರು ಒಂದು ಘಂಟೆಯ ಕಾಲ ಪಿಪಿಟಿ ಮುಖಾಂತರ ಪೂಜೆ, ಆಹಾರ ಮತ್ತು ಆರೋಗ್ಯ ಸಂರಕ್ಷಣೆಯಲ್ಲಿ ಬಳಸಲಾಗುವ ವಿವಿಧ ವನಸ್ಪತಿ ಸಸ್ಯಗಳನ್ನು ಶಾಸ್ತ್ರದ ಆಧಾರದಲ್ಲಿ ವಿವರಿಸಿದರು. ಮತ್ತು ದೇಶದಾದ್ಯಂತ ಇರುವ ವಿವಿಧ ವನಗಳ ಬಗ್ಗೆ ತಮ್ಮ ಭೇಟಿಯ ಸಮಯದಲ್ಲಿ ತಮಗಾದ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಎಮ್.ಜೆ.ಎಫ್.ಲ.ತ್ರಿವಿಕ್ರಮ ಪಟವರ್ಧನರು ತಮ್ಮ ಅಜ್ಜ ವೈದ್ಯ ನೀಲಕಂಠರಾವ್ ಮತ್ತು ದೊಡ್ಡಪ್ಪ ವೈದ್ಯ ಗಣಪತರಾವ್ ಪಟವರ್ಧನರು ಕಷ್ಟಪಟ್ಟು ಸುಮಾರು ನೂರು ವರ್ಷಗಳ ಹಿಂದೆ ನಿರ್ಮಿಸಿದ ವನಸ್ಪತಿ ತೋಟದ ಬಗ್ಗೆ ಮಾಹಿತಿ ನೀಡುತ್ತ ಅದು ಇಂದು ಕೂಡ ಅನೇಕ ಆಯುರ್ವೇದ ವಿದ್ಯಾರ್ಥಿಗಳು ಭೇಟಿ ನೀಡುವ ಸ್ಥಳವಾಗಿದೆ ಎಂದು ನೆನಪಿಸಿಕೊಂಡು ನೆರೆದಿದ್ದ ಎಲ್ಲರನ್ನು ಸ್ವಾಗತಿಸಿದರು. ಇಂದು ನಿರ್ಮಿಸಿದ ಸಂಸ್ಕೃತಿ ವನವನ್ನು ಲಯನ್ಸ್ ಕ್ಲಬ್ ಶಿರಸಿಯು ಸದಾಕಾಲ ಸಂರಕ್ಷಣೆ ಮಾಡುವುದಾಗಿ ಹೇಳಿದರು. ಈ ವನ ನಿರ್ಮಾಣ ಕಾರ್ಯದ ಜವಾಬ್ದಾರಿಯನ್ನು ಉದ್ಯಮಿ ಲ.ಶ್ರೀಕಾಂತ ಹೆಗಡೆಯವರು ವಹಿಸಿಕೊಂಡಿದ್ದನ್ನು ಶ್ಲಾಘಿಸಿದರು.
ಲಿಯೋ ಕ್ಲಬ್ ಶಿರಸಿ ಮತ್ತು ಶ್ರೀನಿಕೇತನ ಮಕ್ಕಳು ತುಂಬ ಉತ್ಸಾಹದಲ್ಲಿ ಪಾಲ್ಗೊಂಡು ಸಸಿಗಳನ್ನು ನೆಟ್ಟರು. ರೀಜನ್ ಛೇರ್ ಪರ್ಸನ್ ಎಮ್.ಜೆ .ಎಫ್ ಲ.ಜ್ಯೋತಿ ಭಟ್ಟರು, ಲಯನ್ ಸದಸ್ಯರು, ಯೂಥ್ ಫಾರ್ ಸೇವಾ ಕಾರ್ಯಕರ್ತರು ಪಾಲ್ಗೊಂಡಿದ್ದರು. ಕೊನೆಯಲ್ಲಿ ಕಾರ್ಯದರ್ಶಿ ಎಮ್.ಜೆ.ಎಫ್.ಲ.ರಮಾ ಪಟವರ್ಧನರು ಎಲ್ಲರನ್ನು ವಂದಿಸಿದರು.