ಭಟ್ಕಳ: ಮಳೆಯಿಂದಾಗಿ ಹಾನಿಗೊಳಗಾದ ಇಲ್ಲಿನ ಜನತೆಗೆ ಪರ್ತಗಾಳಿಯ ಶ್ರೀವಿದ್ಯಾಧೀಶ ತೀರ್ಥ ಸ್ವಾಮಿಗಳ ಆದೇಶದ ಮೇರೆಗೆ, ಜಿಎಸ್‌ಬಿ ಸಮಾಜದ ಮುಖಂಡರು ನಗರದ ವಿವಿಧೆಡೆ ಸಂತ್ರಸ್ತರನ್ನ ಭೇಟಿಯಾಗಿ ಆಹಾರದ ಕಿಟ್ ಮತ್ತು ಕುಡಿಯುವ ನೀರನ್ನು ವಿತರಿಸಿದರು.
ಶ್ರೀಗಳು ತಮ್ಮ ಚಾತುರ್ಮಾಸ್ಯ ಕೈಗೊಂಡಿರುವ ಕುಮಟಾ ನಗರದದಿಂದ ಆಹಾರ ಸಾಮಗ್ರಿ ಮತ್ತು ಹಣ್ಣು- ಹಂಪಲುಗಳನ್ನು ವಾಹನದ ಮೂಲಕ ಭಟ್ಕಳದ ಕಾಮಾಕ್ಷೀ ದೇವಸ್ಥಾನಕ್ಕೆ ತಲುಪುವಂತೆ ಮಾಡಿದ್ದರು. ಇದನ್ನು ಸಮಾಜದ ಮುಖಂಡರಿಗೆ ನೆರೆ ಪ್ರವಾಹದಲ್ಲಿದ್ದವರಿಗೆ ನೀಡುವಂತೆ ಸೂಚನೆ ನೀಡಿದ್ದರು. ಜಾತಿ- ಮತ ಭೇದವಿಲ್ಲದೇ ಸರ್ವರಿಗೂ ಆಹಾರ ಸಾಮಗ್ರಿ ನೀಡುವಂತೆ ಹಾಗೂ ಹೆಚ್ಚಿನ ಸಹಾಯದ ಅಗತ್ಯವಿದ್ದಲ್ಲಿ, ಏನಾದರು ಅನಾಹುತಗಳು ಸಂಭವಿಸಿದರೆ ಶ್ರೀ ಮಠವು ಭಟ್ಕಳದ ಜನತೆಯೊಂದಿಗೆ ಇರುವುದಾಗಿ ತಿಳಿಸಿ ಶ್ರೀಗಳು ಆಶೀರ್ವದಿಸಿರುವುದಾಗಿ ಮುಖಂಡರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಎಸ್‌ಬಿ ಸಮಾಜದ ಅಧ್ಯಕ್ಷ ಸುಬ್ರಾಯ ಕಾಮತ, ಹಾಂಗ್ಯೋ ಐಸ್‌ಸ್ಕ್ರೀಮ್‌ನ ಪ್ರದೀಪ್ ಪೈ, ಉದ್ಯಮಿ ಸುರೇಂದ್ರ ಶ್ಯಾನಭಾಗ, ಮಠದ ಪರವಾಗಿ ಸಾಮಗ್ರಿಯನ್ನು ತಂದ ವಿಕ್ರಮ್ ಭಟ್, ಯೋಗೇಶ್ ಕಾಮತ್ ಕುಮಟಾ, ನಾಗೇಶ ಪೈ ಸೇರಿದಂತೆ ಹಲವಾರು ಸ್ವಯಂಸೇವಕರು ಪರಿಹಾರ ಕಾರ್ಯದಲ್ಲಿ ಭಾಗಿಯಾಗಿದ್ದರು.