ಕುಮಟಾ: ತಾಲೂಕಿನ ಕಲ್ಲಬ್ಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ರಸ್ತೆ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ದಿನಕರ ಶೆಟ್ಟಿ ಅವರು ಭೂಮಿ ಪೂಜೆ ನೆರವೇರಿಸುವ ಜೊತೆಗೆ ಪ್ರಗತಿಯಲ್ಲಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಕಲ್ಲಬ್ಬೆ-ಕುಡವಳ್ಳಿ ರಸ್ತೆ ನಿರ್ಮಾಣಕ್ಕೆ 10 ಲಕ್ಷ ರೂ., ಮೇಲಿನ ಹೊಸಳ್ಳಿ ರಸ್ತೆ ನಿರ್ಮಾಣಕ್ಕೆ 15 ಲಕ್ಷ ರೂ. ಹಾಗೂ ಕಂದವಳ್ಳಿ-ಅಜ್ಜಿಗದ್ದೆ ರಸ್ತೆ ನಿರ್ಮಾಣಕ್ಕೆ 25 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ ಶಾಸಕರು, ಗ್ರಾಮೀಣ ಭಾಗಗಳ ರಸ್ತೆ ನಿರ್ಮಾಣಕ್ಕೆ ಸಾಕಷ್ಟು ಅನುದಾನ ನೀಡಲಾಗಿದೆ. ಗುಣಮಟ್ಟದ ಕಾಮಗಾರಿಗೆ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದರು.
ಕಲ್ಲಬ್ಬೆ ಗ್ರಾ.ಪಂ ಅಧ್ಯಕ್ಷ ಗಿರಿಯಾ ಗೌಡ ಮಾತನಾಡಿ, ದಿನಕರ ಶೆಟ್ಟಿ ಶಾಸಕರಾಗಿ ಆಯ್ಕೆಯಾದ ನಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿಯ ಹೊಳೆ ಹರಿಸಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಸಾಕಷ್ಟು ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಹಿಂದಿನ ಶಾಸಕರು ನಮ್ಮ ಗ್ರಾಪಂನ್ನು ನಿರ್ಲಕ್ಷಿö್ಯಸಿದ್ದರು. ಆದರೆ ಈಗಿನ ಶಾಸಕರು, ನಮ್ಮ ಗ್ರಾ.ಪಂ ವ್ಯಾಪ್ತಿಗೆ 6 ರಿಂದ 8 ಕೋಟಿ ರೂ. ಅನುದಾನ ನೀಡಿದ್ದಾರೆ. ಅವರ ಅವಧಿಯಲ್ಲಿ ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದರು.
ಬಿಜೆಪಿ ಮುಖಂಡ ಜಿ.ಐ.ಹೆಗಡೆ, ಮಾಜಿ ಶಾಸಕರು ಎಲ್ಲದೂ ನಮ್ಮದೇ ಅವಧಿಯಲ್ಲಿ ಮಂಜೂರಾದ ಕಾಮಗಾರಿ ಎಂದು ಸುಳ್ಳು ಹೇಳಿ, ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಸಾರ್ವಜನಿಕರು ಅದಕ್ಕೆ ಕಿವಿಗೋಡಬಾರದು ಎಂದರು.
ಈ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ಮುಖಂಡ ವಿನೋದ ಪ್ರಭು, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಗಜಾನನ ಪೈ, ತಾ.ಪಂ ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ ನಾಗರತ್ನಾ ನಾಯಕ, ಜಿ.ಪಂ ಅಭಿಯಂತರ ಸಂಜು ನಾಯಕ, ವಲಯಾರಣ್ಯಾಧಿಕಾರಿ ಸುಧಾಕರ ಪಟಗಾರ, ಗ್ರಾ.ಪಂ ಸದಸ್ಯ ರವಿ ಹೆಗಡೆ, ಮಧುಸೂದನ ಹೆಗಡೆ, ಮೂರೂರು ಗ್ರಾ.ಪಂ ಸದಸ್ಯರಾದ ಹರ್ಷ ಹೆಗಡೆ, ಆರ್.ವಿ.ಹೆಗಡೆ, ವಸಂತ ಶೆಟ್ಟಿ, ಪ್ರಮುಖರಾದ ಹೇಮಂತಕುಮಾರ ಗಾಂವಕರ, ವಿನಾಯಕ ಭಟ್ಟ ಸಂತೇಗುಳಿ, ಶ್ರೀಧರ ಭಟ್ಟ, ಕಾರ್ತಿಕ ಭಟ್ಟ ಕತಗಾಲ ಸೇರಿದಂತೆ ಮತ್ತಿತರರು ಇದ್ದರು.