ಹೊನ್ನಾವರ: ತಾಲೂಕಿನ ಕೆಳಗಿನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಪ್ಸರಕೊಂಡದಲ್ಲಿ ಮತ್ತೆ ಗುಡ್ಡ ಕುಸಿತದ ಭೀತಿ ಉಂಟಾಗಿದ್ದು ಸ್ಥಳೀಯ ನಿವಾಸಿಗಳನ್ನು ಅಧಿಕಾರಿಗಳು ಸುರಕ್ಷತಾ ದೃಷ್ಟಿಯಿಂದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ತಾಲೂಕಿನಲ್ಲಿ ರೆಡ್ ಅಲಾರ್ಟ್ ಘೋಷಣೆ ಆಗಿರುವುದರ ಜೊತೆಗೆ ಮಳೆಯೂ ಕೂಡ ಬಿಡದೆ ಸುರಿಯುತ್ತಿದೆ. ಕಳೆದ ಎರಡು ವರ್ಷದ ಹಿಂದೆ ಇದೇ ಪ್ರದೇಶದಲ್ಲಿ ಗುಡ್ಡ ಕುಸಿತದ ಭೀತಿ ಉಂಟಾಗಿತ್ತು. ಈ ಬಾರಿಯೂ ಮತ್ತೆ ಕುಸಿಯುವ ಆತಂಕದ ನಡುವೆ ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ನಿವಾಸಿಗಳಿಗೆ ಮಾಹಿತಿ ನೀಡಿ ಕಾಳಜಿ ಕೇಂದ್ರದಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಗಿದೆ. ಗುಡ್ಡ ಪ್ರದೇಶದ ಕೆಳಗಡೆ 60ಕ್ಕೂ ಹೆಚ್ಚಿನ ಕುಟುಂಬ ವಾಸ್ತವ್ಯವಿದ್ದು ಈಗಾಗಲೇ ಹೆಚ್ಚಿನ ಕುಟುಂಬವನ್ನು ಕಾಳಜಿ ಕೇಂದ್ರಕ್ಕೆ ಸ್ಥಳಂತರಿಸಲಾಗಿದೆ.
ಕೆಲ ದಿನದ ಹಿಂದೆ ನೆರೆಯ ಭಟ್ಕಳ ತಾಲೂಕಿನಲ್ಲಿ ಗುಡ್ಡ ಕುಸಿತದ ಕರಾಳ ನೆನಪು ಮಾಸುವ ಮುನ್ನ ಈ ಘಟನೆಯು ಸ್ಥಳೀಯರಿಗೆ ಆತಂಕ ಮೂಡಿಸಿದೆ. ಗುಡ್ಡದ ಮೇಲೆ ಬ್ರಹದಾಕಾರದ ಬಂಡೆಗಳಿದ್ದು, ಸ್ವಲ್ಪ ಎಚ್ಚರ ತಪ್ಪಿದರು ಅದರ ಕೆಳಗೆ ಇರುವ ನಿವಾಸಿಗಳಿಗೆ ಅಪಾಯ ತಪ್ಪಿದ್ದಲ್ಲ. ಸ್ಥಳೀಯ ನಿವಾಸಿಗಳು ನಮಗೆ ಶಾಶ್ವತ ಪರಿಹಾರ ಬೇಕು ಎಂದು ಈ ಹಿಂದೆಯೇ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈಗ ಅಪಾಯ ಸಾಧ್ಯತೆ ಇರುವುದರಿಂದ ಸ್ಥಳಕ್ಕೆ ಆಗಮಿಸಿ ಕಾಳಜಿ ಕೇಂದ್ರಕ್ಕೆ ಶಿಪ್ಟ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತಹಶೀಲ್ದಾರ್, ಗಣಿ ಇಲಾಖೆ, ಕಂದಾಯ, ನೋಡೆಲ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾ.ಪಂ. ಅಧ್ಯಕ್ಷ ಗಂಗಾಧರ ಗೌಡ, ಸದಸ್ಯ ಸುರೇಶ ಗೌಡ, ಅಣ್ಣಪ್ಪ ಗೌಡ, ಇನ್ನುಳಿದ ಸ್ಥಳೀಯರು, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿ ಸ್ಥಳದಲ್ಲೇ ಇದ್ದು ಕಾಳಜಿ ಕೇಂದ್ರದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ.