ಶಿರಸಿ: ಹುಟ್ಟಿನಿಂದ ನಾವು ಬೆಳೆಯುವವರೆಗೆ ತಂದೆ, ತಾಯಿ,ಗುರುಗಳು, ವೈದ್ಯರು ಹೀಗೆ ಅನೇಕರ ಋಣಭಾರ ಹೊಂದಿರುತ್ತೇವೆ. ಹಾಗಾಗಿ ಸಮಾಜಕ್ಕೆ ನಮ್ಮ ಕೈಯಲ್ಲಾಗುವ ಸೇವೆ ಸಲ್ಲಿಸುವ ಮೂಲಕ ಋಣ ಸಂದಾಯ ಮಾಡಬೇಕಾದುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಸಿದ್ದಿ ಹೇಳಿದರು.
ಅವರು ಎಂ ಇ ಎಸ್ ನ ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ವಿಭಾಗ ಮೋಟೆನ್ಸರ್ ಸ್ಮಾರಕ ಸಭಾಬವನದಲ್ಲಿ ಆಯೋಜಿಸಿದ್ದ ದತ್ತಿ ನಿಧಿ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ವ್ಯಕ್ತಿತ್ವ ನಿರ್ಮಾಣದ ಕಾರ್ಯ ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ. ಪ್ರತಿಭೆ ಬೆಳೆಸುವ ಜವಾಬ್ದಾರಿ ವಿದ್ಯಾ ಸಂಸ್ಥೆಯ ಜೊತೆಗೆ ಪಾಲಕರಿಗೂ ಇದೆ. ವಿದ್ಯಾರ್ಥಿಗಳಲ್ಲಿ ಬೇರೆ ಬೇರೆ ರೀತಿಯ ಪ್ರತಿಭೆ ಹುದುಗಿರಬಹುದು ಅದನ್ನು ಅರಿತು ಅವರನ್ನು ಬೆಳೆಯಲು ಬಿಡಬೇಕು. ಸ್ವಾರ್ಥ ಬಿಟ್ಟು ನಮ್ಮ ಊರು, ನಮ್ಮ ನಾಡು ನುಡಿ ಕುರಿತು ಯೋಚಿಸಬೇಕು.ಸಮಾಜ ಇಲ್ಲದೆ ಮನುಷ್ಯ ಬದುಕಲು ಸಾಧ್ಯವಿಲ್ಲ. ನಮ್ಮ ಬೆಳವಣಿಗೆ ಸಂದರ್ಭದಲ್ಲಿ ಸಮಾಜದಿಂದ ಅನೇಕ ಉಪಯೋಗ ಪಡೆದಿರುತ್ತೇವೆ. ಮರಳಿ ಸಮಾಜಕ್ಕೆ ಕೊಡುಗೆ ನೀಡುವ ಕಾರ್ಯ ಆಗಬೇಕು. ಈ ರೀತಿಯ ದತ್ತಿ ನಿಧಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಹುಟ್ಟಿಸುತ್ತದೆ. ನಾನೂ ಸಮಾಜಕ್ಕೆ ಕೊಡುಗೆ ನೀಡಬೇಕೆಂಬ ಮನಸ್ಥಿತಿ ಬರಲು ಇಂತಹ ಕಾರ್ಯಕ್ರಮದಿಂದ ಸಾದ್ಯ ಎಂದರು.
ದಾಂಡೇಲಿ ಬಂಗೂರ್ ನಗರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಆರ್ ಎಲ್ ಕನಕ ಮಾತನಾಡಿ ದ್ವಿತೀಯ ಮಹಾಯುದ್ಧದ ಸಮಯದಲ್ಲಿ ಜಪಾನ್ ಮೇಲೆ ಎರಡು ಅಣು ಬಾಂಬ್ ದಾಳಿ ಆಗಿ ನಾಶವಾದರೂ ಕೆಲವೇ ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಯಿತು ಅದಕ್ಕೆ ಕಾರಣ ಅಲ್ಲಿನ ಯುವಕರ ಇಚ್ಛಾಶಕ್ತಿ, ಶ್ರಮಿಸುವ ಗುಣ. ಯುವಕರಿಗೆ ಪ್ರೋತ್ಸಾಹ ಸಿಕ್ಕರೆ ಭಾರತ ಇನ್ನೂ ವೇಗವಾಗಿ ಅಭಿವೃದ್ಧಿ ಹೊಂದುತ್ತದೆ. ದತ್ತಿ ನಿಧಿ ಇಡುವವರ ಸಂಖ್ಯೆ ಇನ್ನೂ ಹೆಚ್ಚಾಗಬೇಕಿದೆ ಇದು ವಿದ್ಯಾರ್ಥಿಗಳನ್ನು ಸಾಧನೆ ಮಾಡಲು ಪ್ರೋತ್ಸಾಹಿಸುತ್ತದೆ ಎಂದರು.
ಎಂ ಇ ಎಸ್ ನ ಅಧ್ಯಕ್ಷ ಜಿ ಎಂ ಹೆಗಡೆ ಮುಳಖಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಎಂ ಇ ಎಸ್ ಸಂಸ್ಥೆಯ 14 ಅಂಗ ಸಂಸ್ಥೆಗಳಿಂದ ಒಟ್ಟು 54 ಲಕ್ಷಗಳಷ್ಟು ದತ್ತಿ ನಿಧಿಯನ್ನು ಅನೇಕರು ಇಟ್ಟಿದ್ದಾರೆ. ಇಂತಹ ಪ್ರೋತ್ಸಾಹ ವಿದ್ಯಾರ್ಥಿಗಳಲ್ಲಿ ಆದರ್ಶ ವ್ಯಕ್ತಿತ್ವ ರೂಪಿಸಿಕೊಳ್ಳುವ ಹಂಬಲ ಹೆಚ್ಚಾಗುತ್ತದೆ ಎಂದರು.
2,41,071 ರೂ ದತ್ತಿ ನಿಧಿ ಹಣವನ್ನು ಕಾರ್ಯಕ್ರಮದಲ್ಲಿ 93 ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ರಸಾಯನಶಾಸ್ತ್ರ ವಿಭಾಗವು 2011 ರಿಂದ ಹೊರ ತರುತ್ತಿರುವ ಗೊಡೆ ಪತ್ರಿಕೆ ಕೆಮ್ ವಿಜ್ ಬ್ಲಾಗ್ ಅಗಿ ಮಾರ್ಪಡಿಸಿದ್ದು ಅದರ ಅನಾವರಣಗೊಳಿಸಲಾಯಿತು.
ಕಾಲೇಜಿನ ಪ್ರಾಚಾರ್ಯ ಡಾ ಟಿ ಎಸ್ ಹಳೆಮನೆ ಸ್ವಾಗತಿಸಿದರು. ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಪ್ರೊ ಜಿ ಟಿ ಭಟ್ ನಿರೂಪಿಸಿ ವಂದಿಸಿದರು.