• first
  second
  third
  previous arrow
  next arrow
 • ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಹೋರಾಟ ಸಮಿತಿ ರಚಿಸಲು ನಿರ್ಣಯ

  300x250 AD

  ಕುಮಟಾ: ಉತ್ತರಕನ್ನಡ ಜಿಲ್ಲೆಯ ಮಧ್ಯವರ್ತಿ ಕೇಂದ್ರವಾದ ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ಸಂಬಂಧ ಹಕ್ಕೊತ್ತಾಯ ಮಾಡಲು ಹೋರಾಟ ಸಮಿತಿಯೊಂದನ್ನು ರಚಿಸಿಕೊಂಡು ಶಾಸಕ ದಿನಕರ ಶೆಟ್ಟಿ ಅವರ ನೇತೃತ್ವದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುವ ನಿರ್ಣಯವನ್ನು ಇಲ್ಲಿ ನಡೆದ ಸಭೆಯಲ್ಲಿ ಕೈಗೊಳ್ಳಲಾಯಿತು.

  ಪಟ್ಟಣದ ವೈಭವ ಪ್ಯಾಲೇಸ್ ಹಾಲ್‌ನಲ್ಲಿ ಸಾಮಾಜಿಕ ಹೋರಾಟಗಾರ ಆರ್.ಜಿ.ನಾಯ್ಕ ನೇತೃತ್ವದಲ್ಲಿ ಶುಕ್ರವಾರ ಪಕ್ಷಾತೀತವಾಗಿ ಸಭೆ ಸೇರಿದ ಕುಮಟಾದ ಅಭಿವೃದ್ಧಿ ಬಯಸುವ ಸಮಾನ ಮನಸ್ಕರು, ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಿ ಮಾಡಿಸಲು ಅಗತ್ಯವಾಗಿ ಮಾಡಬೇಕಾದ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಿದರು. ಕಾಂಗ್ರೆಸ್ ಹಿರಿಯ ಮುಖಂಡ ಹೊನ್ನಪ್ಪ ನಾಯಕ, ಬಿಜೆಪಿ ಮುಖಂಡರಾದ ಜಿ.ಐ.ಹೆಗಡೆ, ಎಂ.ಎಂ.ಹೆಗಡೆ ಮಾತನಾಡಿ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕುಮಟಾದಲ್ಲಿ ಸ್ಥಾಪಿಸುವ ಒಮ್ಮತದ ನಿರ್ಣಯವನ್ನು ಮಾಡಿ ನಮ್ಮ ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರುವ ಕಾರ್ಯವಾಗಬೇಕು. ಅಂಕೋಲಾ, ಕುಮಟಾ, ಹೊನ್ನಾವರ, ಶಿರಸಿ, ಸಿದ್ದಾಪುರದ ಜನರಿಗೆ ತೀರಾ ಹತ್ತಿರವಾದ ಸ್ಥಳ ಕುಮಟಾ. ಹಾಗಾಗಿ ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಬೇಕು. ಅದಕ್ಕೆ ಅಗತ್ಯವಾದ ಹೋರಾಟದ ಸಿದ್ಧತೆಗಳನ್ನು ನಾವೆಲ್ಲ ಮಾಡಿಕೊಳ್ಳಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

  ಉದ್ಯಮಿ ಎಚ್.ಆರ್.ನಾಯ್ಕ ಕೋನಳ್ಳಿ ಮಾತನಾಡಿ, ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಬೇಕಾದರೆ ಈ ಭಾಗದ ಶಾಸಕರ ನೇತೃತ್ವದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನವಾಗಬೇಕು. ಸರ್ಕಾರದ ಮಟ್ಟದಲ್ಲಿ ಆಸ್ಪತ್ರೆ ಮಂಜೂರಿ ಮಾಡಿಸಲು ಸ್ಥಳೀಯ ಶಾಸಕರು ಸಂಪೂರ್ಣ ಬೆಂಬಲ ಬೇಕು. ಹಾಗಾಗಿ ಸಮಿತಿಯೊಂದನ್ನು ರಚಿಸಿಕೊಂಡು ಶಾಸಕರ ಬಳಿ ಹೋಗಿ ಚರ್ಚಿಸೋಣ ಎಂದರು.

  ಕುಮಟಾ ಬಿಜೆಪಿ ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವ್ಕರ್ ಮಾತನಾಡಿ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಯಾರ ವಿರೋಧವೂ ಇಲ್ಲ. ಶಾಸಕರು, ಸಚಿವರು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರಿಂದಲೆ ಕುಮಟಾದಲ್ಲಿ ನಾಲ್ಕು ಕಡೆ ಜಾಗ ಪರಿಶೀಲಿಸಿದ ಜಿಲ್ಲಾಧಿಕಾರಿ ಅವರು ಸಚಿವರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಹಾಗಾಗಿ ನಾವೆಲ್ಲ ಒಗ್ಗಟ್ಟಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮಂಜೂರಿ ಮಾಡಿಸಲು ನಮ್ಮ ಶಾಸಕರು, ಸಚಿವರ, ಸಂಸದರ ಮೂಲಕವೇ ಪ್ರಯತ್ನ ಮಾಡೋಣ ಎಂದರು.

  300x250 AD

  ಸಭೆಯಲ್ಲಿ ವಿವಿಧ ಸಂಘಟನೆ ಪ್ರಮುಖರು, ಹಿರಿಯರು, ಕನ್ನಡಪರ ಸಂಘಟನೆಗಳ ಮುಖಂಡರ ಒಟ್ಟಾರೆ ಅಭಿಪ್ರಾಯವನ್ನು ಸ್ವೀಕರಿಸಿದ ಸಾಮಾಜಿಕ ಹೋರಾಟಗಾರ ಆರ್ ಜಿ ನಾಯ್ಕ ಅವರು, ಅಂತೀಮವಾಗಿ ಶಾಸಕ ದಿನಕರ ಶೆಟ್ಟಿ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ ಪೂಜಾರಿ ಅವರೊಂದಿಗೆ ಚರ್ಚಿಸಿ, ಅವರೆಲ್ಲರ ಸಲಹೆಯಂತೆ ಮುಂದಿನ ಹೋರಾಟವನ್ನು ನಿರ್ಧರಿಸೋಣ ಎಂದು ಸ್ಪಷ್ಟಪಡಿಸಿದರು. ಈ ನಿರ್ಣಯಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದರು.

  ಸಭೆಯಲ್ಲಿ ಜಿ.ಪಂ ಮಾಜಿ ಸದಸ್ಯ ರತ್ನಾಕರ ನಾಯ್ಕ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಧೀರೂ ಶಾನಭಾಗ, ಬಿಜೆಪಿ ಪ್ರಮುಖರಾದ ವಿನೋದ ಪ್ರಭು, ಪ್ರೊ.ಎಂ.ಜಿ.ಭಟ್, ಪ್ರಶಾಂತ ನಾಯ್ಕ, ಪುರಸಭೆ ಸದಸ್ಯೆ ಮೋಹಿನಿ ಗೌಡ, ಪ್ರಮುಖರಾದ ಜಯಾ ಶೇಟ್, ಕಸಾಪ ಅಧ್ಯಕ್ಷ ಸುಬ್ಬಯ್ಯ ನಾಯ್ಕ, ವಿವಿಧ ಸಂಘಟನೆಗಳ ಪ್ರಮುಖರಾದ ರಾಜು ನಾಯ್ಕ ಮಾಸ್ತಿಹಳ್ಳ, ಸಂಪತಕುಮಾರ, ಜಗದೀಶ ಡಿ ನಾಯಕ, ಅಣ್ಣಪ್ಪ ನಾಯ್ಕ, ನವೀನ ನಾಯ್ಕ, ಭಾಸ್ಕರ ಪಟಗಾರ, ರಾಜೀವ ಗಾಂವ್ಕರ್ ಇತರರು ಇದ್ದರು.

  Share This
  300x250 AD
  300x250 AD
  300x250 AD
  Back to top