ಕುಮಟಾ: ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ಪಟ್ಟಣದ ವಿವಿಧ ದೇವಿ ದೇವಾಲಯಗಳಲ್ಲಿ ಮಹಿಳೆಯರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಕೃಪಾಶೀರ್ವಾದಕ್ಕೆ ಪಾತ್ರರಾದರು.
ಪಟ್ಟಣದ ದೇವರಹಕ್ಕಲದ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ದೇವಿಗೆ ಪುಷ್ಪಾಲಂಕೃತಗೊಳಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು. ಮುತೈದೆಯರು ದೇವಿಗೆ ಉಡಿ ತುಂಬಿ, ಅರಿಶಿಣ-ಕುಂಕುಮ ಸೇವೆ ಗೈದರು. ಗೃಹಿಣಿಯರು ಅರಿಶಿಣಕುಂಕುಮವನ್ನು ಪರಸ್ಪರ ವಿನಿಮಯ ಮಾಡಿಕೊಂಡರು. ನೂರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ದೇವಿಯ ದರ್ಶನ ಪಡೆದು, ವಿಶೇಷ ಪೂಜಾ ಸೇವೆ ನೆರವೇರಿಸುವ ಮೂಲಕ ಪುನೀತರಾದರು. ಮಹಾ ಮಂಗಳಾರತಿ ಬಳಿಕ ಪ್ರಸಾದ ವಿತರಿಸಲಾಯಿತು.
ಅಂತೆಯೇ ಪಟ್ಟಣದ ಮಾಸ್ತಿಕಟ್ಟೆಯ ಶ್ರೀ ಮಹಾಸತಿ ದೇವಸ್ಥಾನದಲ್ಲೂ ಗೃಹಿಣಿಯರು ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮುತೈದೆ ಭಾಗ್ಯದ ಸುರಕ್ಷತೆಗಾಗಿ ಪ್ರಾರ್ಥಿಸಿದರು. ಹಾಗೆಯೇ ಹೆರವಟ್ಟಾದ ಹೊಸಹಿತ್ತಲಿನ ಶ್ರೀ ಕಾಳಿಕಾ ಭವಾನಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಹಬ್ಬದ ವಿಶೇಷ ಪೂಜಾ ಕೈಕಂರ್ಯಗಳನ್ನು ಭಕ್ತರು ನೆರವೇರಿಸುವ ಮೂಲಕ ಇಷ್ಠಾರ್ಥ ಸಿದ್ಧಿಸುವಂತೆ ಪ್ರಾರ್ಥಿಸಿದರು.