ಶಿರಸಿ: ಬೇಡ್ತಿ-ವರದಾ ನದಿ ಜೋಡಣೆಯ ಯೋಜನೆಗೆ ಸರಕಾರ ಸ್ಥಗಿತಗೊಳಿಸಿಲ್ಲ, ಡಿಪಿಆರ್ ಪ್ರಕ್ರಿಯೆ ಪ್ರಗತಿಯಲ್ಲಿ ಇರುವಂತಹ ಸಂದರ್ಭದಲ್ಲಿಯೇ ಮುಖ್ಯಮಂತ್ರಿಯವರು ಯೋಜನೆ ಕೈಗೆತ್ತಿಕೊಂಡಿಲ್ಲ ಹಾಗೂ ಜಾರಿ ಮಾಡಲು ಮುಂದಾಗಿಲ್ಲ ಎಂದು ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯು ಪ್ರಕಟಣೆ ನೀಡಿ, ಹೋರಾಟದ ದಾರಿ ತಪ್ಪಿಸುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಅವರು ಹೇಳುತ್ತಾ ಯೋಜನೆ ಸ್ಥಗಿತಕ್ಕೆ ಬಹಿರಂಗ ಹೋರಾಟ ಮುಂದುವರೆಸಲಾಗುವುದೆಂದು ಹೇಳಿದ್ದಾರೆ.
ಸರಕಾರ ಉನ್ನತ ಮಟ್ಟದ ಅಧಿಕಾರಿಯೊಂದಿಗೆ ಸಂಪರ್ಕಿಸಿದಾಗ ಬೇಡ್ತಿ- ವರದಾ ನದಿ ಜೋಡಣೆ ಸ್ಥಗಿತಗೊಳಿಸುವ ದಿಶೆಯಲ್ಲಿ ಸರಕಾರದಿಂದ ನಿರ್ದೇಶನ, ಆದೇಶ ಹಾಗೂ ಸಚಿವ ಸಂಪುಟದ ತೀರ್ಮಾನ ಇಂದಿನವರೆಗೂ ಆಗದೇ ಇರುವುದರಿಂದ ಯೋಜನೆ ಪ್ರಕ್ರಿಯೆ ಸಂಬಂಧಿಸಿ ಯಾವುದೇ ಸ್ಥಗಿತ ಕಾರ್ಯ ಜರುಗಿದ್ದು ಇರುವುದಿಲ್ಲ ಎಂದು ಮಾಹಿತಿ ದೊರಕಿದ್ದು ಇರುತ್ತದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಅರಣ್ಯವಾಸಿಗಳ ಸಮಸ್ಯೆ, ಅಭಯಾರಣ್ಯ, ಕಸ್ತೂರಿ ರಂಗನ್ ವರದಿಯಿಂದ ಉಂಟಾಗುವ ಅನಾಕೂಲ, ನಿರಾಶ್ರಿತರ ಸಮಸ್ಯೆಗಳೊಂದಿಗೆ ಇಂದು ಬೇಡ್ತಿ ಯೋಜನೆ ಸಮಸ್ಯೆಗಳ ಪಟ್ಟಿಗೆ ಸೇರಲ್ಪಡುತ್ತಿರುವುದರಿಂದ, ಜಿಲ್ಲೆಯ ಜನಪ್ರತಿನಿಧಿಗಳು ಶೀಘ್ರದಲ್ಲಿ ಮುಖ್ಯಮಂತ್ರಿಗಳನ್ನ ಭೇಟಿಮಾಡಿ ಬೇಡ್ತಿ-ವರದಾ ನದಿ ಜೋಡಣೆ ಯೋಜನೆಗೆ ಸ್ಥಗಿತಗೊಳಿಸುವ ಆದೇಶ ಪಡೆದುಕೊಳ್ಳುವಲ್ಲಿ ಇಚ್ಛಾಶಕ್ತಿಯನ್ನು ಪ್ರಟಿಸಬೇಕೆಂದು ಅವರು ಹೇಳಿದರು.
ಲಿಖಿತ ಹೇಳಿಕೆ ಪ್ರಕಟಿಸಲಿ; ನದಿ ಜೋಡಣೆ ಸ್ಥಗಿತಕ್ಕೆ ಸಂಬಂಧಿಸಿ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಸರಕಾರದಿಂದ ಲಿಖಿತ ಹೇಳಿಕೆ ಪಡೆದುಕೊಳ್ಳಬೇಕು, ಜನಪ್ರತಿನಿಧಿಗಳ ಮತ್ತು ಸರಕಾರದ ರಕ್ಷಣೆ ದಿಶೆಯಲ್ಲಿ ಕಾರ್ಯ ಪ್ರವೃತ್ತರಾಗಬಾರದೆಂದು ಸಮಿತಿಯ ಹೇಳಿಕೆಗೆ ರವೀಂದ್ರ ನಾಯ್ಕ ಟೀಕಿಸಿದ್ದಾರೆ.