ಶಿರಸಿ: ನಾಡಿನ ಹೆಸರಾಂತ ಆಯುರ್ವೇದ ವೈದ್ಯ, ಅಖಿಲ ಕರ್ನಾಟಕ ಹವ್ಯಕ ಮಹಾ ಸಭಾದ ಅಧ್ಯಕ್ಷ ಡಾ. ಗಿರಿಧರ ಕಜೆ ಅವರ ಆಯುರ್ವೇದ ಸರಣಿ ಕೃತಿಗಳ ಲೋಕಾರ್ಪಣೆಯ ಭಾಗವಾಗಿ ಶಿರಸಿಯಲ್ಲಿ ನಾಲ್ಕನೇ ಕೃತಿ ಆಯುರ್ವೇದ ಅಂತರಂಗ- ಆರೋಗ್ಯ ಬಹಿರಂಗ ‘ಔನ್ನತ್ಯ’ ಕೃತಿ ಬಿಡುಗಡೆ ಸಮಾರಂಭ ಏರ್ಪಾಟಾಗಿದೆ.
ನಗರದ ಸಾಮ್ರಾಟ್ ಅತಿಥಿಗೃಹದ ವಿನಾಯಕ ಸಭಾಂಗಣದಲ್ಲಿ ಆಗಷ್ಟ 7ರ ಸಂಜೆ 4.30ಕ್ಕೆ ಔನ್ನತ್ಯ ಲೋಕಾರ್ಪಣೆ ಆಗಲಿದೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೃತಿ ಬಿಡುಗಡೆ ನಡೆಸಿ ಸಭೆಯ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಕೃತಿಯ ಕುರಿತು ವಿದ್ಯಾವಾಚಸ್ಪತಿ ವಿ. ಉಮಾಕಾಂತ ಭಟ್ಟ ಕೆರೇಕೈ ಮಾತನಾಡಲಿದ್ದಾರೆ. ಅಭ್ಯಾಗತರಾಗಿ ವಾಗ್ಮಿ ಮೋಹನ ಭಾಸ್ಕರ ಹೆಗಡೆ ಹೆರವಟ್ಟ ಪಾಲ್ಗೊಳ್ಳುವರು. ಆಶಯ ನುಡಿಯನ್ನು ಕೃತಿಕಾರ ಡಾ. ಗಿರಿಧರ ಕಜೆ ಆಡಲಿದ್ದಾರೆ.
ಕಾರ್ಯಕ್ರಮಕ್ಕೆ ಸಿದ್ದಾಪುರದ ಆಯುರ್ವೇದ ಮಹಾವಿದ್ಯಾಲಯ, ವಿಶ್ವಶಾಂತಿ ಸೇವಾ ಟ್ರಸ್ಟ ಕರ್ನಾಟಕ ಹಾಗೂ ಸೆಲ್ಕೋ ಸೋಲಾರ ಸಂಸ್ಥೆ ಸಹಭಾಗಿತ್ವ ನೀಡಿವೆ.
ಡಾ. ಕಜೆ ಅವರು ಆಯುರ್ವೇದ ಜ್ಞಾನ ಯಾನದ ಭಾಗವಾಗಿ ಒಟ್ಟೂ 16 ಕೃತಿಗಳನ್ನು ಬಿಡುಗಡೆ ಮಾಡುತ್ತಿದ್ದು, ನಾಲ್ಕನೇಯ ಕೃತಿ ಬಿಡುಗಡೆಗೆ ಸಜ್ಜಾಗಿದೆ. ಕೃತಿಗೆ ಮುನ್ನುಡಿಯನ್ನು ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ಬರೆದಿದ್ದರೆ ಬೆನ್ನುಡಿಯನ್ನು ವಿಜಯವಾಣಿ ಪ್ರಧಾನ ಸಂಪಾದಕ ಕೆ.ಎನ್.ಚನ್ನೇಗೌಡರು ಬರೆದಿದ್ದಾರೆ. ಶಿರಸಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಸಕ್ತರು ಪಾಲ್ಗೊಳ್ಳಬಹುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.