ಭಟ್ಕಳ: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪಟ್ಟಣದ ಪ್ರವಾಹ ಪೀಡಿತ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿದರು. ಬೆಳಿಗ್ಗೆಯಿಂದ ಸ್ಥಳದಲ್ಲೇ ಇದ್ದು ಪರಿಹಾರ ಕಾರ್ಯಾಚರಣೆಗಳನ್ನು ಪರಿಶೀಲಿಸಿದರು.
ತಾಲೂಕಿನಲ್ಲಿ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗುತ್ತಿದ್ದ ದೋಣಿಗಳನ್ನು ರಕ್ಷಿಸಲು ಕೂಡಲೇ ಜೆಸಿಬಿ ಯಂತ್ರ ತರಿಸಿ, ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ದೋಣಿಗಳನ್ನು ರಕ್ಷಿಸಿದರು. ದೋಣಿಗಳನ್ನು ರಕ್ಷಿಸಲು ಕೇರಳ ಮಾದರಿಯಲ್ಲಿ ಮರೈನ್ ಅಂಬುಲೆನ್ಸ್ ವ್ಯವಸ್ಥೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಮೀನುಗಾರಿಕೆ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಮುಟ್ಟಳ್ಳಿಯಲ್ಲಿ ಭೂ ಕುಸಿತವಾಗಿ ನಾಲ್ವರು ಮೃತ ಪಟ್ಟಿದ್ದಾರೆ, ಮೃತರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿ ಬಳಿಕ ತಾಲೂಕಿನ ಪುರವರ್ಗದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ನೆರೆ ಸಂತ್ರಸ್ತರನ್ನು ಮಾತನಾಡಿಸಿದರು. ನೆರೆಯಿಂದ ಹಾನಿಗೊಳಗಾದ ನಷ್ಟಕ್ಕೆ ಕೂಡಲೇ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಣದ ಟಿಎಂಸಿ ಮಾರುಕಟ್ಟೆಯಲ್ಲಿರುವ ಅಂಗಡಿಗಳಿಗೆ ನೀರು ನುಗ್ಗಿ ಹಾನಿಯಾಗಿದ್ದು, ಅಂಗಡಿ ಮಾಲೀಕರ ಕಷ್ಟವನ್ನು ಆಲಿಸಿದರು.
ತಾಲೂಕಿನ ಚೌಥನಿ, ಜಾಲಿ ಪಟ್ಟಣ, ಮುಟ್ಟಳ್ಳಿಗೆ ಭೇಟಿ ನೀಡಿದ ನಂತರ ಮೂಡಭಟ್ಕಳ ಸೇತುವೆಗೆ ಭೇಟಿ ನೀಡಿ ಪರಿಶೀಲಿಸಿದರು. ಮುಂಡಳ್ಳಿ ಮೊಗೇರ ಕೇರಿಯ ಬೆಳ್ಳಿ ಬ್ರಿಡ್ಜ್, ಬ್ರೇಕ್ ವಾಟರ್ ವೀಕ್ಷಣೆ ಮಾಡಿ ನೀರಿನ ರಭಸಕ್ಕೆ ಕೊಚ್ಚಿ ಹೋದ 6 ಖಾಲಿ ದೋಣಿಗಳನ್ನು ಭಟ್ಕಳ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಕರಾವಳಿ ಪೊಲೀಸ್ ಹಾಗೂ ಕೋಸ್ಟಲ್ ಗಾರ್ಡ್ ಸಿಬ್ಬಂದಿ ಸಹಾಯದಿಂದ ರಕ್ಷಿಸಲಾಯಿತು. ಎಸ್‌ಡಿಆರ್‌ಎಫ್ ತಂಡವನ್ನು ಈಗಾಗಲೇ ಅಂಕೋಲಾ ಹಾಗೂ ಕುಮಟಾ ತಾಲೂಕಿನಲ್ಲಿ ನಿಯೋಜಿಸಲಾಗಿದೆ. ಮತ್ತೆರಡು ಹೆಚ್ಚುವರಿ ತಂಡಗಳು ಮಂಗಳೂರು ಹಾಗೂ ಬೆಳಗಾವಿ ಜಿಲ್ಲೆಯಿಂದ ಈಗಾಗಲೇ ಜಿಲ್ಲೆಗೆ ಬಂದಿವೆ. ಒಂದು ತಂಡವನ್ನು ಭಟ್ಕಳ ಹಾಗೂ ಮತ್ತೊಂದು ತಂಡವನ್ನು ಯಲ್ಲಾಪುರಕ್ಕೆ ನಿಯೋಜಿಸಲಾಗುತ್ತದೆ. ಬಳಿಕ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಸಂತ್ರಸ್ತರಿಗೆ ಪರಿಹಾರಕ್ಕಾಗಿ ಮನವಿ ಮಾಡಿ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ.