ಹೊನ್ನಾವರ: ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ರೋಚಕ ಕಥೆಯನ್ನೊಳಗೊಂಡ ದಂಡಿ ಚಲನಚಿತ್ರವನ್ನು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಪ್ರದರ್ಶಿಸಲು ಸರ್ಕಾರ ಅನುಮತಿ ನೀಡಿದೆ.
ಜಿಲ್ಲೆಯಲ್ಲಿ ಚಿತ್ರಿತವಾದ, ಜಿಲ್ಲೆಯ ಕಲಾವಿದರು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಂಡ ಈ ಚಿತ್ರವನ್ನು ಸ್ವಾತಂತ್ರ್ಯದ ಅಮೃತಮಹೋತ್ಸವ ಸಂದರ್ಭದಲ್ಲಿ ಶಾಲೆಗಳಲ್ಲಿ ಪ್ರದರ್ಶಿಸಲು ಅನುಮತಿ ನೀಡಬೇಕು ಎಂದು ಚಿತ್ರ ನಿರ್ಮಾಣ ಸಂಸ್ಥೆ ಕಲ್ಯಾಣಿ ಪ್ರೊಡಕ್ಷನ್ಸ್ ಸರ್ಕಾರವನ್ನು ವಿನಂತಿಸಿತ್ತು. ಸರ್ಕಾರ ಚಿತ್ರ ವೀಕ್ಷಿಸಿ, ಪರಿಶೀಲಿಸಿ ಶಿಫಾರಸ್ಸು ಮಾಡಲು 7 ಜನ ತಜ್ಞರ ಸಮಿತಿಯೊಂದನ್ನು ನೇಮಿಸಿತ್ತು. ಈ ಸಮಿತಿ 30 ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಚಿತ್ರವನ್ನು ವೀಕ್ಷಿಸಿತು.
ಸ್ವಾತಂತ್ರ್ಯ ಪೂರ್ವದ ಮಹಾತ್ಮ ಗಾಂಧೀಜಿಯವರ ಉಪ್ಪಿನಸತ್ಯಾಗ್ರಹದ ಕಥೆಯುಳ್ಳ ಈ ಚಿತ್ರ, ಅಹಿಂಸೆ, ದೇಶಪ್ರೇಮಕ್ಕೆ ಮಹತ್ವ ನೀಡಿದೆ. ಜಾತ್ಯಾತೀತ ಮೌಲ್ಯಗಳಿವೆ, ಸಹಬಾಳ್ವೆಗೆ ಮಹತ್ವ ನೀಡಿದೆ. ಸೃಜನಶೀಲತೆ ಇದೆ, ಪ್ರಾದೇಶಿಕ ದೃಶ್ಯಗಳು ಚಿತ್ರಣಗೊಂಡಿವೆ. ನೈಜತೆಯಿಂದ ಕೂಡಿದೆ, ಸ್ವಾತಂತ್ರ್ಯ ಹೋರಾಟದಲ್ಲಿ ಸಂಸ್ಕೃತಿಯ ಅಂಶವನ್ನು ಕೂಡಿದೆ. ಮಹಿಳೆಯರ ಪಾತ್ರ ಉತ್ತಮವಾಗಿ ಬಂದಿದೆ. ಸ್ವಾತಂತ್ರ್ಯ ಹೋರಾಟದ ಅರಿವು ಮೂಡಿಸುತ್ತದೆ. ಚಳವಳಿಗಳ ಮಾಹಿತಿ ಇದೆ. ಎಲ್ಲ ವಯೋಮಾನದವರು ನೋಡಬಹುದು. ಸಹಬಾಳ್ವೆ, ಸಾಮಾಜಿಕ ಹೊಂದಾಣಿಕೆ, ಅಹಿಂಸೆಯನ್ನು ಉತ್ತೇಜಿಸುವಂತಿದೆ. ಉತ್ತಮ ಛಾಯಾಗ್ರಹಣದೊಂದಿಗೆ ಪ್ರಾದೇಶಿಕ ಕಲೆಗಳ ಪರಿಚಯವಿದೆ. ಸಾಮಾಜಿಕ ಕಳಕಳಿ ಸಾರುವ ಸಂದೇಶವಿದೆ. ಒಟ್ಟಾರೆಯಾಗಿ ಚಲನಚಿತ್ರ ಮಕ್ಕಳ ವೀಕ್ಷಣೆಗೆ ಯೋಗ್ಯವಾಗಿದೆ ಎಂದು ಶಿಫಾರಸ್ಸು ಮಾಡಿದೆ.
ನಾಡಿನ ಎಲ್ಲ ಖಾಸಗಿ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳಿಗೆ ಈ ಚಿತ್ರವನ್ನು ವೀಕ್ಷಿಸುವ ಅವಕಾಶವನ್ನು ಮಾಡಿಕೊಡಬೇಕು ಎಂದು ಕಲ್ಯಾಣಿ ಪ್ರೊಡಕ್ಷನ್ ಕೋರಿದೆ. ಹೆಚ್ಚಿನ ವಿವರಗಳಿಗೆ 9886852640, 9686133996 ಸಂಪರ್ಕಿಸಲು ಕೋರಿದೆ.