ಶಿರಸಿ : ನೀರಿನ ಸಂರಕ್ಷಣೆ ಜಗತ್ತಿನ ಅಗತ್ಯ ಕಾರ್ಯಗಳಲ್ಲೊಂದಾಗಿದೆ. ಇದರ ನೇತೃತ್ವ ಧರ್ಮಸ್ಥಳದ ಧರ್ಮಾಧಿಕಾರಿ ರಾಜ್ಯಸಭಾ ಸದಸ್ಯ ಡಾ ಡಿ. ವೀರೇಂದ್ರ ಹೆಗ್ಗಡೆ ವಹಿಸಿರುವುದು ಶ್ಲಾಘನೀಯ ಕಾರ್ಯ ಎಂದು ಕರ್ನಾಟಕ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ತಾಲೂಕಿನ ಕುಳವೆ ಪಂಚಾಯತ್ ವ್ಯಾಪ್ತಿಯ ಕಲ್ಲಾಪುರ ಕೆರೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 5.20 ಲಕ್ಷ ರೂ. ವೆಚ್ಚದಲ್ಲಿ ಹೂಳೆತ್ತಿ ಅಭಿವೃದ್ಧಿ ಪಡಿಸಲಾದ ಕೆರೆಗೆ ಶುಕ್ರವಾರ ಬಾಗೀನ ಅರ್ಪಣೆ ಮಾಡಿ ಮಾತನಾಡಿದರು.
ನೀರಿನ ಸಂರಕ್ಷಣೆ ಮಾಡಬೇಕಾದ್ದು ನಮ್ಮೆಲ್ಲರ ಕಾರ್ಯವಾಗಿದ್ದರೂ, ಹೆಗ್ಗಡೆ ಅವರ ನೇತೃತ್ವ ವಹಿಸಿರುವುದರಿಂದ ನಮ್ಮ ನಾಡಿನಲ್ಲಿ ಈ ಕಾರ್ಯ ಇನ್ನಷ್ಟು ಮಹತ್ವ ಪಡೆದುಕೊಂಡಿದೆ ಎಂದರು.
ನಮ್ಮ ಗ್ರಾಮೀಣ ಪ್ರದೇಶದ ಜನರಿಗೆ ಮಾಹಿತಿ, ಕೌಶಲ್ಯ, ಆರೋಗ್ಯ, ಹಣಕಾಸಿನ ಸಹಾಯ ಸಹಕಾರವನ್ನು ಧರ್ಮಸ್ಥಳ ಯೋಜನೆ ಒಂದೇ ಸೂರಿನಲ್ಲಿ ಕಲ್ಪಿಸುತ್ತಿರುವುದು ನಮ್ಮೆಲ್ಲರ ಭಾಗ್ಯವಾಗಿದ್ದು ಯಾರು ಈ ಅಭಿವೃದ್ಧಿ ಕಲ್ಪನೆಯಿಂದ ದೂರವಿರದೇ ಯೋಜನೆಯೊಂದಿಗೆ ಸೇರಿಕೊಂಡು ತಮ್ಮ ಕುಟುಂಬಗಳ ಅಭಿವೃದ್ಧಿಯೊಂದಿಗೆ ಸಮಾಜದ ಮುಖ್ಯವಾಹಿನಿಗೆ ಬರಲು ಸಂಕಲ್ಪ ಮಾಡಬೇಕೆಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಧರ್ಮಸ್ಥಳ ಯೋಜನೆಯ ಶಿರಸಿ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ಮಾತನಾಡಿ ಗ್ರಾಮೀಣ ಅಭಿವೃದ್ಧಿಯ ಕಲ್ಪನೆಯು ಬರಗಾಲದಿಂದ ತೊಂದರೆಗೀಡಾಗದಂತೆ ಕೆರೆಗಳ ಅಭಿವೃದ್ಧಿ ಮಾಡುವ ಮೂಲಕ ಜಲಸಂರಕ್ಷಣೆಗೆ ಪೂಜ್ಯರು ಆದ್ಯತೆಯನ್ನು ನೀಡುತ್ತಿದ್ದು ಅಭಿವೃದ್ಧಿ ಪಡಿಸಲಾದ ಕೆರೆಯಲ್ಲಿ ಸ್ವಚ್ಛತೆಯನ್ನು ಕಾಪಾಡುವುದರೊಂದಿಗೆ ಮೀನುಗಾರಿಕೆಯಂಥ ಚಟುವಟಿಕೆಯನ್ನು ನಡೆಸಿ ಗ್ರಾಮದ ಅಭಿವೃದ್ಧಿಗೆ ಬಳಸಿಕೊಳ್ಳುವಂತೆ ಕರೆ ನೀಡಿದರು.
ಶಿರಸಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಉಪೇಂದ್ರ ಪೈ, ಧರ್ಮಸ್ಥಳದ ಸೇವಾ ಕಾರ್ಯಗಳಿಂದ ನಮ್ಮ ಪ್ರದೇಶ ಅಭಿವೃದ್ಧಿಯತ್ತ ಮುಖ ಮಾಡಿರುವುದು ನಮ್ಮೆಲ್ಲರಿಗೂ ಹೆಮ್ಮೆಯಾಗಿದ್ದು ಅವರ ರಕ್ಷಣೆಯೊಂದಿಗೆ ಪೂಜ್ಯರಿಗೆ ನಮನ ಸಲ್ಲಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಕುಳವೆ ಗ್ರಾಮ ಪಂಚಾಯತಿ ಅಧ್ಯಕ್ಷ ವಿನಯ್ ಭಟ್ , ಸದಸ್ಯರುಗಳಾದ ಶ್ರೀನಾಥ ಶೆಟ್ಟಿ, ಗಂಗಾಧರ ನಾಯ್ಕ್, ಜಾನಕಿ ಹಸ್ಲರ್, ಅರಣ್ಯ ಸಮಿತಿ ಅದ್ಯಕ್ಷ ಗಿರೀಶ್ ಭಟ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರೋಜಾ ನಾಯ್ಕ, ಧರ್ಮಸ್ಥಳ ಯೋಜನೆಯ ತಾಲೂಕಾ ಯೋಜನಾಧಿಕಾರಿ ರಾಘವೇಂದ್ರ ಎಸ್ ನಾಯ್ಕ, ಮೇಲ್ವಿಚಾರಕರಾದ ಬಸನಗೌಡ, ಪ್ರವೀಣ, ಮಮತಾ, ಸೇವಾಪ್ರತಿನಿಧಿ ವಿನಯ, ಲೀಲಾವತಿ ಮುಂತಾದವರು ಪಾಲ್ಗೊಂಡಿದ್ದರು.