ಶಿರಸಿ: ಮಕ್ಕಳಲ್ಲಿ ಅಪೌಷ್ಟಿಕತೆ ಕಡಿಮೆಗೊಳಿಸಿ ಸದೃಢತೆ ಹೆಚ್ಚಿಸಲು ಪೋಷಣ ಶಕ್ತಿ ಅಭಿಯಾನ ನೆರವಾಗುತ್ತದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ನಗರದ ನಂ2 ಶಾಸಕರ ಮಾದರಿ ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟದ ಜೊತೆಗೆ ಕೋಳಿಮೊಟ್ಟೆ ಅಥವಾ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ವಿತರಿಸುವ ತಾಲೂಕು ಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು.
ಮಕ್ಕಳಲ್ಲಿ ಪೌಷ್ಟಿಕ ಅಂಶ ಕಡಿಮೆ ಇರುವಲ್ಲಿ ಪ್ರಧಾನ ಮಂತ್ರಿ ಪೋಷಣ ಶಕ್ತಿ ಅಭಿಯಾನ ಅಡಿ ವಿತರಿಸಲಾಗುತ್ತದೆ. ಪೌಷ್ಟಿಕ ಆಹಾರ ಸೇವನೆ ಜೊತೆ ವ್ಯಾಯಾಮ ಕೂಡ ಮಕ್ಕಳು ನಿಯಮಿತವಾಗಿ ಇಟ್ಟುಕೊಳ್ಳಬೇಕು. ಆರೋಗ್ಯವಂತ ಮಕ್ಕಳು ನಾಡಿನ ಆಸ್ತಿ. ಮಕ್ಕಳ ಆರೋಗ್ಯ ಚೆನ್ನಾಗಿದ್ದರೆ ಉಳಿದವೂ ಚೆನ್ನಾಗೇ ಆಗುತ್ತದೆ ಎಂದರು.
ಅಪೌಷ್ಟಿಕತೆ ಎಂಬುದು ಮಕ್ಕಳಲ್ಲಿ ಕಾಣಬಾರದು. ಕೊಟ್ಟ ಹಣ್ಣು, ಶೇಂಗಾ ಚಿಕ್ಕಿ, ಮೊಟ್ಟೆ ಬಳಸಬೇಕು. ಒಂದರಿಂದ ಎಂಟನೇ ತರಗತಿ ತನಕ ಮಕ್ಕಳಿಗೆ ಇದು ಲಭಿಸುತ್ತದೆ ಎಂದ ಅವರು, ನಂ 2 ಶಾಲೆಗೆ ಇತಿಹಾಸ ಇದೆ. ಒಳ್ಳೆಯ ಶಿಕ್ಷಣ ಕೂಡ ಇದೆ ಎಂದೂ ಬಣ್ಣಿಸಿದರು.
ಡಿಡಿಪಿಐ ಬಸವರಾಜು, ಬಿಇಓ ಎಂ.ಎಸ್.ಹೆಗಡೆ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ನಂದನ ಸಾಗರ, ನಗರಸಭೆ ಸದಸ್ಯೆ ದೀಪಾಮಹಾಲಿಂಗಣ್ಣನವರ, ಉಪ ತಹಸೀಲ್ದಾರ ರಮೇಶ ಹೆಗಡೆ, ತಾ.ಪಂ.ಇಓ ದೇವರಾಜ ಹಿತ್ತಲಕೊಪ್ಪ ಇತರರು ಇದ್ದರು.