ಶಿರಸಿ: ಕನ್ನಡ ಭಾಷೆಯ ಬಗ್ಗೆ ಕೀಳರಿಮೆ ಹೊಂದಿದವರು ಅದರ ಹಿರಿಮೆ ಅರಿಯುವಲ್ಲಿ ವಿಫಲರಾಗಿದ್ದಾರೆ ಎಂದು ಉಪವಿಭಾಗಾಧಿಕಾರಿ ಆರ್.ದೇವರಾಜ್ ಹೇಳಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗ ಹಾಗೂ ಐಕ್ಯೂಎಸಿ ವತಿಯಿಂದ ಗುರುವಾರ ಹಮ್ಮಿಕೊಂಡ ಕನ್ನಡ ಸಾಹಿತ್ಯ ವೇದಿಕೆ ಉದ್ಘಾಟನೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಲ್ಲಿ 1500ಕ್ಕೂ ಹೆಚ್ಚು ಭಾಷೆಗಳಿದ್ದು, ಅವುಗಳಿಗೆ ತನ್ನದೇ ಆದ ಸ್ಥಾನ ಮಾನಗಳಿವೆ. ರಾಜ್ಯದಲ್ಲಿ ಕನ್ನಡ ಭಾಷೆ ಮಹತ್ವದ ಸ್ಥಾನ ಹೊಂದಿದೆ. “ಕನ್ನಡ ಭಾಷೆ ಕಣ್ಣುಗಳು ಇದ್ದಂತೆ. ಉಳಿದ ಭಾಷೆಗಳು ಕಣ್ಣುಗಳಿಗೆ ಹಾಕುವ ಕನ್ನಡಕವಾಗಿದ್ದು, ಕಣ್ಣುಗಳನ್ನು ರಕ್ಷಿಸಿಕೊಂಡು ಕನ್ನಡಕದ ಮೂಲಕ ಪ್ರಪಂಚ ನೋಡಲು ಮುಂದಾಗಬೇಕು”. ಕನ್ನಡ ಭಾಷೆಯನ್ನು ಮನೆಯಿಂದಲೇ ಕಟ್ಟುವ ಕೆಲಸವಾಗಬೇಕು. ಕನ್ನಡ ಸಾಹಿತ್ಯ ಓದುವ ಮೂಲಕ ಮಾನವೀಯ ಹಾಗೂ ಮೌಲ್ಯಯುತ ಜೀವನ ಕಟ್ಟಿಕೊಳ್ಳಬೇಕು ಎಂದ ಅವರು ಯುಪಿಎಸ್ ಸಿ, ಕೆಎಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಕನ್ನಡ ಮಹತ್ವದ ಸ್ಥಾನ ಪಡೆದಿದೆ ಎಂದರು.
ಮೈಸೂರು ಕೆಎಸ್‌ಒಯು ಸಂಯೋಜನಾಧಿಕಾರಿ ಡಾ.ಡಿ.ಕೆ.ಗಾಂವ್ಕರ್ ಅವರು ಕನ್ನಡ ಸಾಹಿತ್ಯ ಜೀವನ ಮೌಲ್ಯಗಳು ಬಗ್ಗೆ ಉಪನ್ಯಾಸ ನೀಡಿ, ಮನುಷ್ಯನ ಬದುಕಿನ ಇನ್ನೊಂದು ರೂಪವೇ ಸಾಹಿತ್ಯ. ಕನ್ನಡ ಸಾಹಿತ್ಯದ ಎಲ್ಲಾ ಘಟ್ಟಗಳಲ್ಲಿಯೂ ಜೀವನ ಮೌಲ್ಯಗಳು ಹಾಸುಹೊಕ್ಕಾಗಿರುವುದನ್ನು ಕಾಣುತ್ತೇವೆ. ಸಮಾಜದಲ್ಲಿ ಮೌಲ್ಯಗಳು ಪರಿವರ್ತನೆಯಾಗದೆ ವಿಸ್ತಾರಗೊಳ್ಳುತ್ತವೆ. ಮೌಲ್ಯವು ವೀರತ್ವ ಮೀರಿ ಮಾನವೀಯತೆ, ಅಂತಃಕರಣದಲ್ಲಿ ಅಡಗಿದೆ. ಇನ್ನೊಬ್ಬರಿಗೆ ಮೋಸ, ದ್ರೋಹ, ಕೇಡು ಬಯಸದಿರುವುದು ಮೌಲ್ಯ ಎಂದು ಸಾಧರ ಪಡಿಸಿದ ಅವರು ಮನುಷ್ಯನ ಜೀವನವೇ ಒಂದು ಕಲಿತ ಕ್ರಿಯೆಯಾಗಿದ್ದು, ಈ ಕ್ರಿಯೆ ಹಾಡು, ಸಾಹಿತ್ಯ, ಕಥೆಯಿಂದ ಕೂಡಿದೆ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಬಿ.ಪ್ರಕಾಶ್ ಪ್ರಾಸ್ತಾವಿಕ ಮಾತನಾಡಿದರು. ಪ್ರಾಂಶುಪಾಲರಾದ ಡಾ.ದಾಕ್ಷಾಯಿಣಿ ಜಿ.ಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮ ನಿಮಿತ್ತ ಹಮ್ಮಿಕೊಂಡ ಸಿದ್ಧಭಾಷಣ, ಗೀತಾಗಾಯನ, ಸ್ವರಚಿತ ಕವನ ವಾಚನ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಾದ ಕವನ ಸಂಗಡಿಗರು ಪ್ರಾರ್ಥಿಸಿ, ನಯನಾ ಡಿ.ನಾಯ್ಕ್ ಸ್ವಾಗತಿಸಿ, ತೇಜಸ್ವಿನಿ, ಅಕ್ಕಮ್ಮ ನಿರೂಪಿಸಿ, ಅಕ್ಷತಾ ವಂದಿಸಿ, ಪಲ್ಲವಿ ಎಂ.ನಾಯ್ಕ್ ಹಾಗೂ ವಿನಯ್ ಅತಿಥಿಗಳ ಪರಿಚಯಿಸಿದರು.
ಐಕ್ಯೂಎಸಿ ಸಂಚಾಲಕ ವಿಶ್ವಲಿಂಗ ಪ್ರಸಾದ್, ಕನ್ನಡ ಸಹಾಯಕ ಪ್ರಾಧ್ಯಾಪಕ ಡಿ.ಬಸವರಾಜ್, ನಿವೃತ್ತ ಗ್ರಂಥಪಾಲಕ ಎಂ.ಎA.ಹೆಬ್ಬಳ್ಳಿ, ಉಪನ್ಯಾಸಕರಾದ ಎಸ್.ಎಂ.ನೀಲೇಶ, ಎ.ವಿಜಯ್, ಎಂ.ಆರ್.ಮAಚಪ್ಪ, ಭೂಪಾಲ್ ಬಾಳಂಬೀಡ, ಅನ್ನಪೂರ್ಣ ಸೊಬಗಿನ, ರೇಖಾ ಬಿಳಗಲಿ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳಿದ್ದರು.