ಹೊನ್ನಾವರ: ತಾಲೂಕಿನ ನಗರಬಸ್ತಿಕೇರಿ, ಉಪ್ಪೂಣೆ, ಹೆರಂಗಡಿ, ಜಲವಳ್ಳಿ ಗ್ರಾ.ಪಂ. 2021-22ನೇ ಸಾಲಿನ ವಸತಿಯೋಜನೆ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆಯಡಿ ಮನೆ ಮಂಜೂರಾದ ಫಲಾನುಭವಿಗಳಿಗೆ ಕಾರ್ಯದೇಶ ವಿತರಣಾ ಕಾರ್ಯಕ್ರಮ ಹೆರಂಗಡಿ ಗ್ರಾ.ಪಂ.ಸಭಾಭವನದಲ್ಲಿ ನಡೆಯಿತು.
ನಾಲ್ಕು ಗ್ರಾ.ಪಂ.ವ್ಯಾಪ್ತಿಯ ಒಟ್ಟು 78 ಫಲಾನುಭವಿಗಳಿಗೆ ಕಾರ್ಯದೇಶ ಹಸ್ತಾಂತರದ ಬಳಿಕ ಶಾಸಕ ಸುನೀಲ ನಾಯ್ಕ ಮಾತನಾಡಿ, ಅಧಿಕಾರಿಗಳ ಮಾಡಿದ ನ್ಯುನತೆಯಿಂದ ಆಧಾರ ಲಿಂಕ್ ಆಗದೇ, ಹೆಸರು ಬದಲಾವಣೆಯಿಂದ ಹಲವು ಮನೆ ಬ್ಲಾಕ್ ಆಗಿತ್ತು. ಆದರೆ ಈಗ ಸಮಸ್ಯೆ ಬಗೆಹರಿದಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದಿಂದ ಮನೆ ಕೊಡುವುದು ಕರ್ತವ್ಯವಾಗಿದೆ. ಕ್ಷೇತ್ರದ ಪ್ರತಿ ಪಂಚಾಯತಿಗೆ ಮನೆ ನೀಡಲಾಗಿದೆ. ಯಾರಿಗಾದರೂ ಮನೆ ನಿರ್ಮಾಣಕ್ಕೆ ಆರ್ಥಿಕ ಸಮಸ್ಯೆ ಇದ್ದರೆ ಬ್ಯಾಂಕ್ ನಿಂದ ಸಾಲವನ್ನು ಎರಡು ದಿನದಲ್ಲಿ ಕೊಡಿಸಲು ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು. ಮನೆಯ ಸಹಾಯಧನ ಪಡೆಯಲು ಯಾರಿಗೂ ಕಮಿಷನ್ ಕೊಡಬೇಡಿ ಎಂದು ಸಲಹೆ ನೀಡಿದರು.
ತಾಲೂಕ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ ಮಾತನಾಡಿ, ವಸತಿ ಯೋಜನೆಯ ಫಲಾನುಭವಿಗಳು ನಿಗದಿತ ಅವಧಿಯಲ್ಲಿ ಮನೆ ನಿರ್ಮಾಣ ಕಾರ್ಯರಂಭ ಮಾಡಿದ್ದೆ ಆದಲ್ಲಿ ಸರ್ಕಾರದ ಅನುದಾನ ನಿಮ್ಮ ಖಾತೆಗೆ ಬರಲಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಉದ್ದೇಶ ಎಲ್ಲರಿಗೂ ಮನೆ, ಆರೊಗ್ಯ ಶಿಕ್ಷಣ ನೀಡುವುದಾಗಿದೆ. ಇದರ ಸೌಲಭ್ಯ ಸಾರ್ವಜನಿಕರು ಪಡೆಯುವಂತೆ ಸಲಹೆ ನೀಡಿದರು.
ಗ್ರಾ.ಪಂ.ಅಧ್ಯಕ್ಷ ಪ್ರಮೋದ ನಾಯ್ಕ, ಮಂಜುನಾಥ ನಾಯ್ಕ, ಮಂಜುಳಾ ಗೌಡ, ಗ್ರಾ.ಪಂ. ಉಪಾಧ್ಯಕ್ಷೆ , ಭಾರತಿ ನಾಯ್ಕ, ಚಂದ್ರಹಾಸ ನಾಯ್ಕ, ಗ್ರಾ.ಪಂ.ಒಕ್ಕೂಟದ ಅಧ್ಯಕ್ಷ ಕೇಶವ ನಾಯ್ಕ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಕೃಷ್ಣಾನಂದ ಕೆ. ಮತ್ತಿತರರು ಇದ್ದರು.
ಇದೇ ರೀತಿ ಮಾವಿನಕುರ್ವಾ, ಖರ್ವಾ, ಹಡಿನಬಾಳ , ಚಿಕ್ಕನಕೋಡ, ಮುಗ್ವಾ ಗ್ರಾ.ಪಂ. ವ್ಯಾಪ್ತಿಯ 62 ಮನೆಗಳಿಗೆ ಕಾರ್ಯದೇಶ ಪತ್ರ ವಿತರಿಸಿದರು. ಈ ವೇಳೆ ಗ್ರಾ.ಪಂ. ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಹಾಜರಿದ್ದರು.