Slide
Slide
Slide
previous arrow
next arrow

ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಭರವಸೆ ನೀಡಿದ ಆರೋಗ್ಯ ಸಚಿವ

300x250 AD

ಕಾರವಾರ: ಶಿರೂರಿನಲ್ಲಿ ಆಂಬ್ಯುಲೆನ್ಸ್ ಅಪಘಾತ ನಡೆದ ಬಳಿಕ ಉತ್ತರ ಕನ್ನಡ ಜನತೆ ರೊಚ್ಚಿಗೆದ್ದಿದ್ದಾರೆ. ಕಳೆದ ಕೆಲ ದಿನಗಳಿಂದ ಇದೇ ವಿಚಾರವಾಗಿ ಟ್ವಿಟ್ಟರ್ ಅಭಿಯಾನ ನಡೆಸುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಜನರು, ನೋ ಹಾಸ್ಪಿಟಲ್, ನೋ ವೋಟ್ ಎಂಬ ಹ್ಯಾಶ್ ಟ್ಯಾಗ್ ಅನ್ನೂ ಬಳಸಿ ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಜಿಲ್ಲೆಯಲ್ಲಿ ಒಂದು ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಭರವಸೆ ನೀಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಏಕಿಲ್ಲ..? ಈ ಕೂಗು ಬಹಳ ದಿನಗಳಿಂದ ಇದ್ದರೂ ಕೂಡಾ ಅದು ಮತ್ತೆ ಮುನ್ನಲೆಗೆ ಬಂದಿದ್ದು, ಶಿರೂರು ಟೋಲ್ ಗೇಟ್‌ನಲ್ಲಿ ನಡೆದ ಭೀಕರ ಆಂಬುಲೆನ್ಸ್‌ ಅಪಘಾತದ ಬಳಿಕ. ಈ ಅಪಘಾತದಲ್ಲಿ ನಾಲ್ವರು ಮೃತಪಟ್ಟ ಬಳಿಕ ಉತ್ತರ ಕನ್ನಡ ಕನ್ನಡ ಜಿಲ್ಲೆಯ ಜನರ ಸಹನೆಯ ಕಟ್ ಒಡೆದಿತ್ತು. ಟ್ವಿಟ್ಟರ್, ಫೇಸ್‌ಬುಕ್ ಸೇರಿದಂತೆ ಹಲವೆಡೆ ಜನರು ಅಭಿಯಾನವನ್ನೇ ಆರಂಭಿಸಿದ್ದರು.

ವೀ ನೀಡ್ ಎಮರ್ಜೆನ್ಸಿ ಹಾಸ್ಪಿಟಲ್ ಇನ್ ಉತ್ತರ ಕನ್ನಡ ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿತ್ತು. ಇದೀಗ ಈ ಕುರಿತು ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಉತ್ತರ ಕನ್ನಡ ಜಿಲ್ಲೆಗೆ ಒಂದು ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಟ್ರಾಮಾ ಕೇರ್ ಸೆಂಟರ್ ಅವಶ್ಯಕತೆ ಇದೆ ಎಂಬ ಸಾರ್ವಜನಿಕರ ಬೇಡಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸಿದ್ದೇನೆ. ಕಾರವಾರದ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಟ್ರಾಮಾ ಸೆಂಟರ್ ಸ್ಥಾಪನೆ ಹಾಗೂ ಜಿಲ್ಲೆಯಲ್ಲಿ ಒಂದು ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ಶೀಘ್ರವೇ ಸೂಕ್ತ ತೀರ್ಮಾನ ಕೈಗೊಳ್ಳುವ ಭರವಸೆ ನೀಡುತ್ತಿದ್ದೇನೆ ಎಂದು ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

ಇದೇ ವೇಳೆ, ಉತ್ತರ ಕನ್ನಡ ಜಿಲ್ಲೆಯ ಆರೋಗ್ಯ ಮೂಲ ಸೌಕರ್ಯ ಅಗತ್ಯತೆಗಳ ಕುರಿತಂತೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳೊಂದಿಗೆ ಶೀಘ್ರವೇ ಸಭೆ ನಡೆಸಿ ಆದಷ್ಟು ಬೇಗ ಒಂದು ಕ್ರಿಯಾಯೋಜನೆ ರೂಪಿಸಿ ಕಾರ್ಯಗತಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದೂ ಸಚಿವ ಡಾ. ಕೆ. ಸುಧಾಕರ್ ಭರವಸೆ ನೀಡಿದ್ದಾರೆ.

300x250 AD

ಹಾಗೆ ನೋಡಿದ್ರೆ, ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಆಗ್ರಹಿಸಿ 2019ರಲ್ಲಿ ಕೂಡಾ ಟ್ಟಿಟ್ಟರ್ ಅಭಿಯಾನ ನಡೆದಿತ್ತು. ಅಂದಿನ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಸೂಕ್ತ ಕ್ರಮದ ಭರವಸೆ ನೀಡಿದ್ದರು. ಆದ್ರೆ, ಎಚ್ಡಿಕೆ ಬಳಿಕ ಇಬ್ಬರು ಸಿಎಂ ಬದಲಾದರೂ ಉತ್ತರ ಕನ್ನಡದ ಜನತೆಯ ಬೇಡಿಕೆಯಾದ ಸುಸಜ್ಜಿತ ಆಸ್ಪತ್ರೆ ಕನಸಾಗೇ ಉಳಿದಿದೆ.

ಕಳೆದ ಕೆಲ ದಿನಗಳಿಂದ ಮತ್ತೆ ಇದೇ ವಿಚಾರವಾಗಿ ಟ್ವಿಟ್ಟರ್ ಅಭಿಯಾನ ನಡೆಸುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಜನರು, ನೋ ಹಾಸ್ಪಿಟಲ್, ನೋ ವೋಟ್ ಎಂಬ ಹ್ಯಾಶ್ ಟ್ಯಾಗ್ ಅನ್ನೂ ಬಳಸಿ ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹಾಗೂ ರಾಜ್ಯದ ಮುಖ್ಯಮಂತ್ರಿ, ಆರೋಗ್ಯ ಸಚಿವರಿಗೆ ಟ್ವಿಟ್ಟರ್‌ನಲ್ಲಿ ಟ್ಯಾಗ್ ಮಾಡಿ ಯುವ ಜನತೆ ಪ್ರಶ್ನಿಸುತ್ತಿದೆ.

ಸುಸಜ್ಜಿತ ಆಸ್ಪತ್ರೆಗಾಗಿ ಕೇವಲ ಟ್ವಿಟರ್ ಅಭಿಯಾನವೊಂದೇ ಅಲ್ಲ, ಉತ್ತರ ಕನ್ನಡದ ಪ್ರತಿ ತಾಲ್ಲೂಕಿನಲ್ಲಿ ಈ ಬಗ್ಗೆ ಸಭೆ – ಚರ್ಚೆಗಳು ನಡೆಯುತ್ತಿದ್ದು, ನಿರಂತರವಾಗಿ ಪ್ರತಿಭಟನೆಗಳನ್ನು ನಡೆಸಲು ಕೂಡ ಅನೇಕ ಸಂಘಟನೆಗಳು ಸಜ್ಜಾಗುತ್ತಿವೆ. ಜಿಲ್ಲಾ ಕೇಂದ್ರ ಕಾರವಾರದಲ್ಲಿ ಜನತೆ ಸುಸಜ್ಜಿತ ಆಸ್ಪತ್ರೆಗಾಗಿ ರಕ್ತದ ಮೂಲಕ ಪ್ರಧಾನಿಗೆ ಪತ್ರ ಬರೆಯಲು ನಿರ್ಧರಿಸಿದ್ದು, ಅಗಸ್ಟ್ 15 ರೊಳಗೆ ಉತ್ತರ ಕನ್ನಡಕ್ಕೆ ತುರ್ತು ಚಿಕಿತ್ಸಾ ಆಸ್ಪತ್ರೆಯನ್ನ ಘೋಷಿಸುವಂತೆ ಸರ್ಕಾರಕ್ಕೆ ಆಗ್ರಹಿಸಲು ಮುಂದಾಗಿದ್ದಾರೆ. ಈ ಬಗ್ಗೆ ಈಗಾಗಲೇ ಸಿದ್ಧತೆ ನಡೆಸಿದ್ದು, ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದು ಅವರ ಗಮನ ಸೆಳೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ.

Share This
300x250 AD
300x250 AD
300x250 AD
Back to top