ಶಿರಸಿ: ವಿದ್ಯಾರ್ಥಿ ದೆಸೆಯಲ್ಲೇ ತಂಬಾಕು ಸೇರಿದಂತೆ ದುಶ್ಚಟಗಳಿಂದ ದೂರವಿದ್ದು, ಉತ್ತಮ ಆಶಯದೊಂದಿಗೆ ಜೀವನದ ಗುರಿ ತಲುಪಬೇಕು ಎಂದು ಶಿರಸಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು.
ಅವರು ನಗರದ ಗಣೇಶ್ ನಗರ ಸರ್ಕಾರಿ ಪ್ರೌಢಶಾಲೆಯ 110 ವಿದ್ಯಾರ್ಥಿಗಳಿಗೆ ತಮ್ಮ ಟ್ರಸ್ಟ್ ವತಿಯಿಂದ ಉಚಿತ ಪಠ್ಯ ಪುಸ್ತಕ, ಕ್ರೀಡಾ ಸಾಮಗ್ರಿ ವಿತರಿಸಿ ನಂತರ ಮಾತನಾಡಿ, ದುಶ್ಚಟಗಳಿಂದಾಗಿ ಯುವಕರು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಬಗ್ಗೆ ವಿದ್ಯಾರ್ಥಿ ದೆಸೆಯಲ್ಲೇ ಜಾಗೃತರಾಗುವುದು ಅತೀ ಅಗತ್ಯ. ಓದಿನ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಆಸೆ, ಆಕಾಂಕ್ಷೆಗಳನ್ನು ಬದಿಗೊತ್ತಿ, ಚಂಚಲಗೊಳ್ಳುವ ಮನಸ್ಸನ್ನು ಹತೋಟಿಗೆ ತಂದುಕೊಂಡು ಶ್ರದ್ಧೆ, ಪರಿಶ್ರಮದಿಂದ ಅಭ್ಯಾಸ ಮಾಡಿದಾಗ ಮಾತ್ರ ಪೋಷಕರ ಆಶಯ ಈಡೇರಿಸಲು ಸಾಧ್ಯ. ಹೆಚ್ಚೆಚ್ಚು ವಿದ್ಯಾರ್ಥಿಗಳು ತಮ್ಮ ಗುರಿ ತಲುಪಿದರೆ ಸುಭದ್ರ ದೇಶ, ಸಮಾಜ ನಿರ್ಮಿಸಲು ಸಹಕಾರಿಯಾಗುತ್ತದೆ ಎಂದರು.
ವಿದ್ಯಾರ್ಥಿಗಳು ಯಾವುದೇ ಆಮಿಷಗಳಿಗೆ ಒಳಗಾಗದೆ ಓದಿನ ಕಡೆಗೆ ಮನಸ್ಸನ್ನು ಕೇಂದ್ರೀಕರಿಸಬೇಕು. ಸಹಪಾಠಿಗಳು, ಉಪನ್ಯಾಸಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು. ಪೋಷಕರ ಪರಿಸ್ಥಿತಿ ಅರಿತುಕೊಂಡು ಬದ್ಧತೆಯಿಂದ ವಿದ್ಯಾಭ್ಯಾಸ ಪೂರೈಸಬೇಕು. ಆಗ ಮಾತ್ರ ಗುರಿ ಮುಟ್ಟಲು, ಸಮಾಜದಲ್ಲಿ ಗೌರವ ಸಂಪಾದಿಸಲು ಸಾಧ್ಯವಾಗುತ್ತದೆ ಎಂದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ವರ್ಷ ಪಾಸ್ ಆದ ಇಬ್ಬರು ಬಡ ವಿದ್ಯಾರ್ಥಿಗಳಿಗೆ ತಮ್ಮ ಟ್ರಸ್ಟ್ ವತಿಯಿಂದ ತಲಾ 2500 ರೂಪಾಯಿ ಗೌರವಧನ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ದಯಾನಂದ ನಾಯ್ಕ, ಶಿಕ್ಷಕ ವೃಂದದವರು, ಆಟೋ ಸಂಘದ ಈಶ್ವರ್ ಆಚಾರಿ, ಆದರ್ಶ ನಾಯ್ಕ ಹಾಗೂ ಇತರರು ಇದ್ದರು