ಕುಮಟಾ: ನೆರೆಯಿಂದಾಗಿ ಶಾಲೆಗೆ ತೆರಳುವ ರಸ್ತೆ ಹಾಗೂ ಶಾಲಾ ಮೈದಾನ ಸಂಪೂರ್ಣ ಕೊಳಚೆಯಂತಾಗಿದ್ದು, ಗ್ರಾಮದ ಯುವಕರು ಸ್ವಂತ ಖರ್ಚಿನಲ್ಲಿ ದುರಸ್ಥಿಗೊಳಿಸಿ ಮಕ್ಕಳ ಓಡಾಟಕ್ಕೆ ನೆರವಾಗಿದ್ದಾರೆ.
ತಾಲೂಕಿನ ದೀವಗಿ ಕೆಳಗಿನಕೇರಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು ಪ್ರತಿ ವರ್ಷವೂ ನೆರೆಗೆ ತುತ್ತಾಗಿ ಶಾಲಾ ಕೋಣೆಗಳಲ್ಲಿಯೂ ನೀರು ತುಂಬುತ್ತಿತ್ತು. ಈ ಬಾರಿಯ ಮಳೆಗೆ ಶಾಲಾ ಹೊರ ಆವರಣ ಸಂಪೂರ್ಣ ಕೊಳಚೆಯಂತಾಗಿ, ಶೌಚಾಲಯವೂ ಬಳಸದಂತಾಗಿತ್ತು. ಇದರಿಂದಾಗಿ ಪ್ರತಿನಿತ್ಯ ಶಾಲೆಗೆ ಬರುವ ಮಕ್ಕಳಿಗೆ ಕಿರಿಕಿರಿ ಉಂಟಾಗುತ್ತಿತ್ತು.
ಇದನ್ನು ಮನಗಂಡ ಸ್ಥಳೀಯ ಯುವಕರು ತಮ್ಮ ಸ್ವಂತ ಖರ್ಚಿನಲ್ಲಿ ಕಲ್ಲು, ಸಿಮೆಂಟ್, ಮರಳನ್ನು ತಂದು ಓಡಾಡುವ ಮಾರ್ಗವನ್ನು ದುರಸ್ಥಿಗೊಳಿಸಿದ್ದಾರೆ. ಅಲ್ಲದೆ ಶೌಚಾಲಯ ಹಾಗೂ ಶಾಲಾ ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಂದೀಪ ಅಂಬಿಗ, ಕೃಷ್ಣ ಅಂಬಿಗ, ರಮೇಶ ಅಂಬಿಗ, ಗಂಗಾಧರ ಅಂಬಿಗ, ರತ್ನಾಕರ ಅಂಬಿಗ ಸೇರಿದಂತೆ ಹಲವರು ಇದ್ದರು.