ಅಂಕೋಲಾ: ರಾಷ್ಟ್ರ ಮತ್ತು ಸಮಾಜದ ಹಿತಕ್ಕಾಗಿ ಸಮರ್ಪಣಾ ಭಾವನೆಯಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕಾರ್ಯ ನಿರ್ವಹಿಸುತ್ತ ಬಂದು ನೂರು ವರ್ಷ ಸಮೀಪಿಸುತ್ತಿದ್ದರೂ ಸಂಘದ ವಿಚಾರಧಾರೆಗಳಿಗೆ ಮುಪ್ಪು ಬಂದಿಲ್ಲ. ಪೀಳಿಗೆಯಿಂದ ಪೀಳಿಗೆಗೆ ಸಂಘ ಮುಂದುವರಿಯುತ್ತಿದ್ದು, ಅಧಿಕಾರದ ಆಸೆ, ವೈಯಕ್ತಿಕ ಹಿತಾಸಕ್ತಿ, ವ್ಯಕ್ತಿ ಪೂಜೆಗಳಿಂದ ದೂರವಿದ್ದು, ಕೇವಲ ರಾಷ್ಟ್ರದ ಹಿತದೃಷ್ಟಿಯಿಂದ, ಸಮರ್ಪಣಾ ಮನೋಭಾವದಿಂದ ಸಂಘ ವೈಶ್ವಿಕ ಮಾನ್ಯತೆ ಸಂಪಾದಿಸಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜೇಷ್ಠ ಪ್ರಚಾರಕ ಸು.ರಾಮಣ್ಣ ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪಟ್ಟಣದ ಶ್ರೀಶಾಂತಾದುರ್ಗಾ ದೇವಾಲಯದ ಸಭಾ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸಂಘದ ಎರಡನೇ ಸರಸಂಘ ಸಂಚಾಲಕ ಮಾಧವ ಸದಾಶಿವರಾವ ಗೋಳ್ವಲಕರ ಅವರ ಕುರಿತ ರಾಷ್ಟ್ರ ತಪಸ್ವಿ ಶ್ರೀಗುರೂಜಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದರು.
ರಾಷ್ಟ್ರಕ್ಕೆ ಸಂಕಷ್ಟ ಎದುರಾದಾಗ ನಾವು ಹೇಗೆ ನಡೆದುಕೊಳ್ಳಬೇಕು ಎಂದು ಸಮಾಜಕ್ಕೆ ತಿಳಿಸುವ ಕೆಲಸ ಸಂಘ ಮಾಡುತ್ತಿದೆ. ವಿರಸವನ್ನು ಮರೆತು ಒಂದಾಗಿ, ಜಾತಿಯತೆ ದೂರ ಮಾಡಿ ಆತ್ಮೀಯತೆ ಬೆಳೆಸಿ, ಅಸ್ಪೃಶ್ಯತೆಯನ್ನು ಅಪ್ಪುಗೆಯ ಮೂಲಕ ತೊಡೆದು ಹಾಕಿದಾಗ ಮಾತ್ರ ಹಿಂದೂ ಸಂಘಟನೆ ಬಲಗೊಳ್ಳಲು ಸಾಧ್ಯ ಎಂದ ಅವರು ನಾವೆಲ್ಲ ಹಿಂದು ನಾವೆಲ್ಲ ಒಂದು ಎಂದು ಗುರೂಜಿ ಅವರು ವಿಶ್ವ ಹಿಂದೂ ಪರಿಷತ್ ಮೂಲಕ ಅರಿವು ಮೂಡಿಸುವ ಕೆಲಸ ಮಾಡಿದ್ದರು ಎಂದು ತಿಳಿಸಿದರು.
ಭಾರತ ಇಂದು ವಿಶ್ವಗುರು ಆಗುತ್ತಿದೆ, ಭಾರತ ಮಾತೆ ಲೋಕಮಾತೆಯಾಗುತ್ತಿದ್ದಾಳೆ. ರಾಷ್ಟ್ರ ರಕ್ಷಣೆಯ ಸಂಘದ ಧೋರಣೆ ಗುರುಗಳ ಮಾರ್ಗದರ್ಶನದಂತೆ ಸದಾ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.
ಪುಸ್ತಕ ಬಿಡುಗಡೆಗೊಳಿಸಿದ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಬಂಟ ಮಾತನಾಡಿ, ಗುರುಗಳ ಜೀವನ, ರಾಷ್ಟ್ರ ಸಮರ್ಪಣಾ ಮನೋಭಾವ ಎಲ್ಲರೂ ಮಾದರಿಯಾಗಲಿ ಎಂದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಗಿರೀಶ ಶೆಟ್ಟಿ ಸ್ವಾಗತಿಸಿದರು, ಅರುಣ ಶೇಣ್ವಿ ವಂದಿಸಿದರು.