ಕಾರವಾರ: ನಗರ ವ್ಯಾಪ್ತಿಯಲ್ಲಿ ಮರ ಬಿದ್ದು ರಸ್ತೆ ಸಂಚಾರ ತಡೆ ಉಂಟಾದರೆ, ಮರ, ಕಟ್ಟಡ ಕುಸಿದು ಬಿದ್ದ ಸಂದರ್ಭದಲ್ಲಿ ರಕ್ಷಣೆ ಕಾರ್ಯಾಚರಣೆಗೆ ಇನ್ನು ಮುಂದೆ ನಗರಸಭೆಯ ರಕ್ಷಕ ವಾಹನ ಸಜ್ಜಾಗಿರಲಿದೆ.
ತುರ್ತು ಪರಿಸ್ಥಿತಿಯಲ್ಲಿ ಹಾಗೂ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಎಲ್ಲ ವಾರ್ಡ್‌ಗಳಲ್ಲಿ ಸಂಚರಿಸಿ ರಕ್ಷಣಾ ಕಾರ್ಯಾಚರಣೆಗಾಗಿ ಸುಮಾರು 10 ಲಕ್ಷ ರು. ಮೌಲ್ಯದ ಮಹಿಂದ್ರಾ ಬುಲೆರೋ ಕ್ಯಾಂಪ ವಾಹನವನ್ನು ನಗರಸಭೆಯವರು ಖರೀದಿಸಿದ್ದು, ರಕ್ಷಣಾ ಕಾರ್ಯಕ್ಕೆ ಸಜ್ಜುಗೊಳಿಸಲಾಗಿದೆ. ಪೌರಾಡಳಿತ ಇಲಾಖೆಯ ಅನುಮೋದನೆ ಪಡೆದು ನಗರಸಭೆಯವರು ಸ್ವಂತ ಖರ್ಚಿನಲ್ಲಿ ಈ ವಾಹನ ಖರೀದಿಸಿದ್ದಾರೆ.
ಈ ವಾಹನದಲ್ಲಿ ತುರ್ತು ಕಾರ್ಯಾಚರಣೆಗೆ ಬೇಕಾದ ಲೈಫ್ ಜಾಕೆಟ್, ಕರಗಸ, ಜನರೇಟರ್, ಲೈಟ್, ಹಾರೆಕೋಲು ಮುಂತಾದ ರಕ್ಷಣಾ ಸಲಕರಣೆಗಳನ್ನು ಈ ವಾಹನದಲ್ಲಿ ಇರಿಸಲಾಗುತ್ತದೆ. ಜತೆಗೆ 24*7 ರಕ್ಷಣಾ ಕಾರ್ಯಕ್ಕಾಗಿ ಸಿಬ್ಬಂದಿಗಳನ್ನು ಕೂಡ ಈ ವಾಹನದಲ್ಲಿ ನಿಯೋಜನೆ ಮಾಡಲಾಗುತ್ತದೆ.